ಎಚ್.ಎಮ್.ಎಸ್. ಬೀಗಲ್ ಹಡಗಿನ ಸಾಹಸಯಾನ – ಅಧ್ಯಾಯ 1 ಪೂರ್ಣಪಾಠ

 

(ಹತ್ತನೇ ಕಂತಿನೊಂದಿಗೆ ಅಧ್ಯಾಯ 1 ಪೂರ್ಣವಾಗಿದ್ದು ಅದರ ಪೂರ್ಣಪಾಠವನ್ನು ಇಲ್ಲಿ ಒಂದೇ ಬಾರಿ ಓದಲು ಅನುವಾಗುವಂತೆ ನೀಡಲಾಗಿದೆ. ಓದಿ. ನಿಮ್ಮ ಸಲಹೆ, ಕಮೆಂಟುಗಳನ್ನು ದಾಖಲಿಸಿ. ಎರಡನೇ ಅಧ್ಯಾಯ ಶೀಘ್ರದಲ್ಲೇ ಆರಂಭವಾಗುವುದು.)

ಎಚ್.ಎಮ್.ಎಸ್. ಬೀಗಲ್ ಹಡಗಿನ ಸಾಹಸಯಾನದ ವೇಳೆ ನಡೆಸಿದ ಭೌಗೋಳಿಕ ಹಾಗೂ ಭೂವೈಜ್ಞಾನಿಕ ಸಂಶೋಧನೆಗಳ ದಿನಚರಿ

ಚಾರ್ಲ್ಸ್ ಡಾರ್ವಿನ್

(ಆರಿಜಿನ್ ಆಫ್ ಸ್ಪೀಸೀಸ್ ಖ್ಯಾತಿಯ ಲೇಖಕ)

ಅಧ್ಯಾಯ 1

 

ಪ್ರಾಯಾ ಬಂದರು – ರಿಬಿಯೆರಾ ಗ್ರಾಂಡಿ – ಇತರೆ ವಸ್ತುಗಳು ತುಂಬಿದ ಗಾಳಿಯ ದೂಳು – ಸಾಗರದ ಗೊಂಡೆ ಹುಳು ಮತ್ತು ಕಟಲ್ ಮೀನು ಗಳ ಬದುಕು – ಸೇಂಟ್ ಪಾಲಿನ ಜ್ವಾಲಾಮುಖಿಯದಲ್ಲದ ಶಿಲೆಗಳು – ವಿಶಿಷ್ಟ ಹೂಳುಗಳು – ದ್ವೀಪದ ಮೊದಲ ವಲಸಿಗ ಕೀಟಗಳು – ಫರ್ನಾಂಡೊ ನೊರೊನ್ಹಾ – ಬಾಹಿಯಾ – ನಯವಾಗಿ ಹೊಳೆವ ಕಲ್ಲುಗಳು – ಡಿಯೋಡಾನಿನ ಬದುಕು – ಸಾಗರದ ಮೇಲೆ ತೇಲುವ ವಸ್ತುಗಳು ಹಾಗೂ ಉಳಿಕೆಗಳು – ಸಾಗರ ಬಣ್ಣಗೆಡುವುದಕ್ಕೆ ಕಾರಣಗಳು

 

ಸೇಂಟ್ ಜಾಗೊ – ಕೇಪ್ ಡಿ ವರ್ಡಿ ದ್ವೀಪಗಳು

ಭಾರಿಯಾಗಿ ಬೀಸಿದ ನೈಋತ್ಯ ಮಾರುತಗಳಿಂದಾಗಿ ಎರಡು ಬಾರಿ ಹಿಮ್ಮೆಟ್ಟಿದ ಬೀಗಲ್ ಹಡಗು ಕೊನೆಗೂ ಡೇವನ್ ಪೋರ್ಟಿನಿಂದ ಹೊರಟಿತು. ಹತ್ತು ಫಿರಂಗಿಗಳಿದ್ದ ಆ ಕೂವೆ ಹಡಗು ಕಪ್ತಾನ ಫಿಟ್ಜ್ ರಾಯನ ನೇತೃತ್ವದಲ್ಲಿ ಡಿಸೆಂಬರ್ 27, 1831ರಂದು ಪ್ರಯಾಣ ಆರಂಭಿಸಿತು. ಕಪ್ತಾನ ಕಿಂಗರ ನೇತೃತ್ವದಲ್ಲಿ ಆರಂಭವಾಗಿದ್ದ ಪಟಗೋನಿಯ ಹಾಗೂ ಟಿಯೆರ್ರಾ ಡೆ ಫ್ಯೂಗೊದ ಸರ್ವೇಕ್ಷಣೆಗಳನ್ನು ಮುಗಿಸುವುದು, ಚಿಲಿ, ಪೆರು ಹಾಗೂ ಶಾಂತಿಸಾಗರದ ಕೆಲವು ದ್ವೀಪಗಳ ಕರಾವಳಿಗಳ ಸರ್ವೆ ಹಾಗೂ ಪ್ರಪಂಚದ ಹಲವೆಡೆ ಕಾಲಮಾನವನ್ನು ಅಳೆಯುವುದು ಈ ಅನ್ವೇಷಣೆಯ ಉದ್ದೇಶವಾಗಿತ್ತು. ಜನವರಿ 6 ರಂದು ನಾವು ಟೆನೆರಿಫೆ ತಲುಪಿದೆವು. ಆದರೆ ನಾವು ಕಾಲರಾ ತಂದು ಬಿಡುತ್ತೇವೆಂಬ ಭಯದಿಂದ ಅಂದೇ ತೀರಕ್ಕೆ ಇಳಿಯಲಿಲ್ಲ. ಮರುದಿನ ಬೆಳಗ್ಗೆ ದೂರದಲ್ಲಿ  ಅಂಕುಡೊಂಕಾಗಿದ್ದ ಗ್ರಾಂಡ್ ಕ್ಯಾನರಿ ದ್ವೀಪಗಳ ಬೆನ್ನ ಹಿಂದಿನಿಂದ ಉದಯಿಸಿದ ಸೂರ್ಯ ತಟಕ್ಕನೆ ಟೆನೆರಿಫೆಯ ಶಿಖರವನ್ನು ಬೆಳಗುವುದನ್ನು ಕಂಡೆವು. ಶಿಖರದ ಕೆಳಗೆಲ್ಲ ಮೋಡಗಳು ಹಿಂಜಿದ ಉಣ್ಣೆಯಂತೆ ಕವಿದಿದ್ದುವು.

 

ನಾವು ಮರೆಯಲಾಗದಂತಹ ದಿನಗಳಲ್ಲಿ ಇದು ಮೊದಲನೆಯದು. ಜನವರಿ 18, 1832ರಂದು ನಾವು ಸೇಂಟ್ ಜಾಗೋ ದ್ವೀಪದ ಪ್ರಾಯಾ ಬಂದರಿನಲ್ಲಿ ಲಂಗರು ಹಾಕಿದೆವು.   ಪ್ರಸ್ಥಭೂಮಿಯ ಭೂಶಿರ ಡೆ ವರ್ಡಿಯಲ್ಲಿನ ಪ್ರಮುಖ ದ್ವೀಪ ಸೇಂಟ್ ಜಾಗೋದಲ್ಲಿನ ಬಂದರು ಅದು.

 

ಕಡಲಿನಿಂದ ನೋಡಿದಾಗ ಪ್ರಾಯಾ ಬಂದರಿನ ಪರಿಸರವೆಲ್ಲವೂ ಬರಡೆನ್ನಿಸುತ್ತದೆ. ಹಿಂದೆ ಸುರಿದ ಜ್ವಾಲಾಮುಖಿಯ ಬೆಂಕಿ ಹಾಗೂ ಉಷ್ಣವಲಯದ ಸೂರ್ಯನ ಸುಡು ಬಿಸಿಲಿನಿಂದಾಗಿ ಬಹುತೇಕ ಸ್ಥಳಗಳಲ್ಲಿನ ನೆಲದಲ್ಲಿ ಹಸಿರು ಬೆಳೆಯದಂತಾಗಿದೆ. ಪ್ರಸ್ಥಭೂಮಿಯಿಂದ ಹಂತ ಹಂತವಾಗಿ ನೆಲ ಎತ್ತರವಾಗುತ್ತದೆ. ಅಲ್ಲಲ್ಲಿ ಚೂಪಾದ ಗೋಪುರಗಳಂತಹ ಬೆಟ್ಟಗಳಿವೆ. ಕ್ಷಿತಿಜದಗುಂಟವೂ ಎತ್ತರದ ಪರ್ವತಮಾಲೆ ವಕ್ರರೇಖೆಗಳನ್ನು ಎಳೆದಿದೆ. ಸದಾ ಮಬ್ಬಾಗಿರುವ ಅಲ್ಲಿನ ಹವೆಯಲ್ಲಿ ಇದು ಬಲು ಕೌತುಕಮಯವಾದ ದೃಶ್ಯವಾಗಿ ತೋರುತ್ತದೆ. ಆಗಷ್ಟೆ ಕಡಲಿನಿಂದ ಇಳಿದು ಪ್ರಪ್ರಥಮ ಬಾರಿಗೆ ತೆಂಗಿನ ತೋಪಿನೊಳಗೆ ಕಾಲಿಡುವ ಯಾವನಿಗೂ ಖುಷಿಯಾಗದೇ ಇರದು. ಆ ದ್ವೀಪ ಸಾಧಾರಣವೆನ್ನಿಸಿದರೂ, ಕೇವಲ ಇಂಗ್ಲೆಂಡಿನ ನೆಲವನ್ನಷ್ಟೆ ನೋಡಿದ್ದವರಿಗೆ ಹಸಿರು ತುಂಬಿದ ನಾಡಿಗಿಂತಲೂ ಬಣಗುಡುವ ಈ ಬರಡೂ ಹೊಸತೆನ್ನಿಸುವುದರಲ್ಲಿ ಅಚ್ಚರಿಯೇನಲ್ಲ. ಆ ಲಾವಾಶಿಲೆಗಳ ಬಯಲಿನಲ್ಲಿ ದೂರ ದೂರದವರೆಗೆ ಒಂದೇ ಒಂದು ಹಸಿರೆಲೆಯೂ ಗೋಚರಿಸದು. ಆದರೂ ಕೆಲವು ಹಸುಗಳ ಜೊತೆಗೆ ಆಡುಗಳ ಹಿಂಡುಗಳು ಅಲ್ಲಿ ಬದುಕು ಕಟ್ಟಿಕೊಂಡಿವೆ. ಮಳೆ ಅಪರೂಪ. ಆದರೆ ಬಲು ಅಲ್ಪ ಕಾಲ ಮಳೆ ಭಾರಿಯಾಗಿ ಸುರಿಯುತ್ತದೆ. ಮಳೆ ಸುರಿದ ತಕ್ಷಣದಲ್ಲಿಯೇ ಅಲ್ಲಿರುವ ಎಲ್ಲ ಸಂದುಗೊಂದುಗಳಿಂದಲೂ ಹಸಿರು ಚಿಗುರೊಡೆಯುತ್ತದೆ. ಬಲು ಶೀಘ್ರವೇ ಒಣಗಿ ಹುಲ್ಲಾಗಿ ಬಿಡುವ ಇದೇ ಆ ಪ್ರಾಣಿಗಳ ಬದುಕಿಗೆ ಜೀವಾಳ. ಕಳೆದೊಂದು ವರ್ಷದಿಂದಲೂ ಇಲ್ಲಿ ಮಳೆಯಾಗಿಲ್ಲ. ಈ ದ್ವೀಪವು ಪತ್ತೆಯಾದ ಮೊದಲಲ್ಲಿ ಪ್ರಾಯಾ ಬಂದರಿನ ನೆರೆಹೊರೆಯಲ್ಲೆಲ್ಲ ಮರಗಳ ಹೊದಿಕೆ ಇತ್ತಂತೆ. ವಿವೇಚನೆಯಿಲ್ಲದೆ ಮರಗಳನ್ನು ನಾಶಮಾಡಿದ್ದು ಇಲ್ಲಿ, ಸೇಂಟ್ ಹೆಲೆನಾ ಹಾಗೂ ಕೆಲವು ಕೆನರಿ ದ್ವೀಪಗಳನ್ನು ಹೆಚ್ಚೂಕಡಿಮೆ ಬರಡಾಗಿಸಿದೆ1. ಮಳೆಗಾಲದ ಕೆಲವು ದಿನಗಳಲ್ಲಿ ಮಾತ್ರ ನೀರು ಹರಿಯುವ ಸಪಾಟಾದ ವಿಶಾಲ ಕಣಿವೆಯಲ್ಲಿ ಅಲ್ಲಲ್ಲಿ ಎಲೆಗಳೇ ಇಲ್ಲದ ಕುರುಚಲು ಪೊದೆಗಳನ್ನು ಕಾಣಬಹುದು. ಕೆಲವೇ ಜೀವಗಳು ಈ ಕಣಿವೆಯಲ್ಲಿ ವಾಸಿಸುತ್ತವೆ. ಇಲ್ಲಿ ಸಾಮಾನ್ಯವಾಗಿ ಕಾಣಬರುವ ಪಕ್ಷಿ ಎಂದರೆ ಡಾಸೆಲೋ ಇಯಾಗೊಯೆನ್ಸಿಸ್ ಎನ್ನುವ ಮಿಂಚುಳ್ಳಿ. ಹರಳು ಬೀಜದ ಗಿಡಗಳ ಮೇಲೆ ಕುಳಿತಿರುವ ಇದು ಮಿಡತೆಗಳನ್ನೋ, ಹಲ್ಲಿಗಳನ್ನೋ ಹಿಡಿಯಲು ಚಿಮ್ಮುವುದನ್ನು ನೋಡಬಹುದು. ಗಾಢ ಬಣ್ಣವಿದ್ದರೂ ಇದು ಯುರೋಪಿನ ಮಿಂಚುಳ್ಳಿಗಳಷ್ಟು ಸುಂದರವೇನಲ್ಲ. ಅದರ ಹಾರಾಟ ಹಾಗೂ ಒಣ ಪ್ರದೇಶದಲ್ಲಿರುವ ವಾಸನೆಲೆಯಲ್ಲಿಯೂ ಅದು ಯುರೋಪಿನವುಗಳಿಗಿಂತ ಸಾಕಷ್ಟು ಭಿನ್ನ.

 

ಒಂದು ದಿನ ನಾನು ಮತ್ತು ಇನ್ನಿಬ್ಬರು ಅಧಿಕಾರಿಗಳು ಪ್ರಾಯಾ ಬಂದರಿನ ಪೂರ್ವಕ್ಕೆ ಕೆಲವು ಮೈಲುಗಳಷ್ಟು ದೂರದಲ್ಲಿದ್ದ ರಿಬಿಯೆರಾ ಗ್ರಾಂಡಿ ಎನ್ನುವ ಗ್ರಾಮಕ್ಕೆ ತೆರಳಿದೆವು. ಸೈಂಟ್ ಮಾರ್ಟಿನ್ನನ ಕಣಿವೆಯನ್ನು ತಲುಪುವವರೆಗೂ ಆ ಪ್ರದೇಶವೆಲ್ಲವೂ ತೆಳು ಕಂದು ಬಣ್ಣದ್ದಾಗಿ ತೋರುತ್ತಿತ್ತು. ಆದರೆ ಅಲ್ಲಿದ್ದ ಸಣ್ಣ ತೊರೆಯಿಂದಾಗಿ ಕಣಿವೆ ದಟ್ಟವಾದ ಗಿಡಮರಗಳಿಂದ ಹಸಿರಾಗಿತ್ತು. ಒಂದು ಗಂಟೆಯೊಳಗೆ ನಾವು ರಿಬಿಯೆರಾ ಗ್ರಾಂಡೆ ತಲುಪಿಯಾಗಿತ್ತು. ಅಲ್ಲಿ ಪಾಳು ಬಿದ್ದ ಕೋಟೆ ಹಾಗೂ ಚರ್ಚೊಂದನ್ನು ನೋಡಿ ಅಚ್ಚರಿಯಾಯಿತು.  ಬಂದರಿನಲ್ಲಿ ಪೂರ್ತಿ ಹೂಳು ತುಂಬಿಕೊಳ್ಳುವ ಮುನ್ನ ಈ ಪುಟ್ಟ ಗ್ರಾಮವೇ ಆ ದ್ವೀಪದ ಪ್ರಮುಖ ಸ್ಥಾನವಾಗಿತ್ತು. ಈಗ ಅದು ವಿಷಣ್ಣವೆನಿಸದರೂ ಸುಂದರ ಚಿತ್ರದಂತಿತ್ತು. ಕರಿಯ ಪಾದ್ರಿಯೊಬ್ಬನನ್ನು ಮಾರ್ಗದರ್ಶಿಯಾಗಿಯೂ, ಆ ಹಿಂದಿನ ಯುದ್ಧದಲ್ಲಿ ಪಾಲ್ಗೊಂಡಿದ್ದ ಸ್ಪೈನಿನವನೊಬ್ಬನನ್ನು ಅನುವಾದಕನನ್ನಾಗಿಯೂ ಇಟ್ಟುಕೊಂಡು ಅಲ್ಲಿದ್ದ ವಿವಿಧ ಕಟ್ಟಡಗಳಿಗೆ ಭೇಟಿ ನೀಡಿದೆವು. ಅವುಗಳಲ್ಲಿ ಪುರಾತನವಾದೊಂದು ಚರ್ಚೇ ಪ್ರಧಾನವಾಗಿತ್ತು. ಆ ದ್ವೀಪವನ್ನು ಆಳಿದ ಗವರ್ನರುಗಳು ಹಾಗೂ ಕಪ್ತಾನರನ್ನು ಇಲ್ಲಿಯೇ ದಫನು ಮಾಡಲಾಗಿತ್ತು. ಅಲ್ಲಿದ್ದ ಕೆಲವು ಗೋರಿಗಳು ಹದಿನಾರನೆ ಶತಮಾನಕ್ಕೆ ಸೇರಿದ್ದುವು.1 ಅಲ್ಲಿ ನೆಲೆಯಿದ್ದ ರಾಜದೂತರ ಆಭರಣಗಳಷ್ಟೆ ಯುರೋಪನ್ನು ನೆನಪಿಸುವಂತಹ ವಸ್ತುಗಳಾಗಿದ್ದುವು. ಆ ಮೈದಾನದ ಒಂದು ಬದಿಗೆ ಚರ್ಚು ಇತ್ತು. ಚರ್ಚಿನ ನಡುವಿನಲ್ಲಿ ದೊಡ್ಡ ಬಾಳೆಯ ತೋಪೊಂದು ಬೆಳೆದಿತ್ತು. ಇನ್ನೊಂದು ಬದಿಯಲ್ಲಿ ಇದ್ದ ಆಸ್ಪತ್ರೆಯಲ್ಲಿ ಹತ್ತು-ಹನ್ನೆರಡು ದೀನ ರೋಗಿಗಳಿದ್ದರು.

ರಾತ್ರಿ ಊಟಕ್ಕೆ ನಾವು ವೇಂಡಾಗೆ ಮರಳಿದೆವು. ಅಲ್ಲಿ ನಮ್ಮನ್ನು ನೋಡಲು ಅಚ್ಚ ಗಪ್ಪು ಬಣ್ಣದ ಗಂಡಸರು, ಹೆಂಗಸರು ಹಾಗೂ ಮಕ್ಕಳ ದೊಡ್ಡ ಜನಸಂದಣಿಯೇ ನೆರೆದಿತ್ತು. ಅವರೆಲ್ಲ ಬಲು ಖುಷಿಯಾಗಿದ್ದಂತಿತ್ತು. ನಾವೇನು ಹೇಳಿದರೂ, ಮಾಡಿದರೂ ಎಲ್ಲರೂ ಜೋರು ನಗುವೇ ಉತ್ತರವಾಗಿತ್ತು. ಪಟ್ಟಣವನ್ನು ಬಿಡುವ ಮೊದಲು ನಾವು ಚರ್ಚಿಗೆ ಭೇಟಿ ನೀಡಿದೆವು. ಸಣ್ಣ ಚರ್ಚಿನಷ್ಟು ಇದು ಶ್ರೀಮಂತವಾಗಿರಲಿಲ್ಲ. ತಾಳ ಮೇಳವಿಲ್ಲದೆ ಅರಚುತ್ತಿದ್ದ ವಾದ್ಯವಷ್ಟೆ ಅಲ್ಲಿತ್ತು. ಆ ಕರಿಯ ಪಾದ್ರಿಗೆ ನಾವು ಕೆಲವು ಶಿಲ್ಲಿಂಗುಗಳನ್ನು ನೀಡಿದೆವು. ಸ್ಪೈನಿನವನೋ ಅವನ ತಲೆಯನ್ನು ತಟ್ಟಿ, ಅವನು ಕರಿಯನೆಂಬ ಬೇಧ ನಮಗೆ ತೋರಲಿಲ್ಲವೆಂದು ಹೇಳಿದ. ಅನಂತರ ನಮ್ಮ ಕುದುರೆಗಳು ಎಷ್ಟೂ ವೇಗವಾಗಿ ಸಾಗಬಲ್ಲುದೋ ಅಷ್ಟೂ ಶೀಘ್ರವಾಗಿ ಅಲ್ಲಿಂದ ಪ್ರಾಯಾ ಬಂದರಿಗೆ ಮರಳಿದೆವು.

ಮತ್ತೊಂದು ದಿನ ನಮ್ಮ ಸವಾರಿ  ದ್ವೀಪದ ನಟ್ಟ ನಡುವೆ ಇದ್ದ ಸೇಂಟ್ ಡೊಮಿಂಗೊ ಗ್ರಾಮಕ್ಕೆ  ಹೋಯಿತು. ಹಲವು ಗಿಡ್ಡ ಜಾಲಿಮುಳ್ಳಿನ ಗಿಡಗಳಿದ್ದ ಸಣ್ಣ ಮೈದಾನವನ್ನು ದಾಟಿ ನಡೆದೆವು. ಸದಾ ಬೀಸುತ್ತಿದ್ದ ಗಾಳಿಯು ಅವುಗಳ ಶಿರವನ್ನು ಬಾಗಿಸಿತ್ತು. ಕೆಲವಂತೂ ನೆಲವನ್ನೇ ಮುಟ್ಟುವಂತೆ ಬಾಗಿದ್ದುವು. ಅವುಗಳೆಲ್ಲವೂ ಬಾಗಿದ ದಿಕ್ಕು ಉತ್ತರ-ಈಶಾನ್ಯ ಮುಖಿಯಾಗಿಯೂ, ದಕ್ಷಿಣ-ನೈಋತ್ಯ ಮುಖಿಯಾಗಿಯೂ ಇದ್ದುವು. ಅಂದರೆ ಇವು ಅಲ್ಲಿ ಸಹಜವಾಗಿಯೇ ಇದ್ದ ಬಲವಾದ ವಾಣಿಜ್ಯ ಮಾರುತಗಳ ದಿಕ್ಕನ್ನು ಸೂಚಿಸುತ್ತಿದ್ದುವಷ್ಟೆ. ಅಲ್ಲಿ ಪಯಣಿಗರ ಗುರುತು ಒಂದಿಷ್ಟೂ ಉಳಿದಿರಲಿಲ್ಲವಾಗಿ ನಾವು ಹಾದಿ ತಪ್ಪಿ ಫ್ಯುಂಟೆಸಿಗೆ ಹೋದೆವು. ಅಲ್ಲಿಗೆ ತಲುಪಿದ ಮೇಲಷ್ಟೆ ಇದು ನಮಗೆ ಅರಿವಾಗಿದ್ದು. ಆದರೆ ಹೀಗೆ ತಪ್ಪಿದ್ದೂ ಒಳ್ಳೆಯದೇ ಆಯಿತು. ಫ್ಯೂಂಟೀಸು ಒಂದು ಸುಂದರ ಹಳ್ಳಿ. ಅಲ್ಲೊಂದು ಪುಟ್ಟ ತೊರೆಯೂ ಇತ್ತು. ಅಲ್ಲಿನ ನಿವಾಸಿಗಳ ಹೊರತಾಗಿ ಉಳಿದೆಲ್ಲವೂ ಸಮೃದ್ಧವಾಗಿಯೇ ಇತ್ತು. ಕಪ್ಪಗೆ ಒಣಕಲಾಗಿದ್ದ ಮಕ್ಕಳು, ಸಂಪೂರ್ಣ ಬೆತ್ತಲಾಗಿ ತಮಗಿಂತಲೂ ಇಮ್ಮಡಿ ದೊಡ್ಡದಾದ ಸೌದೆಯ ಹೊರೆ ಹೊತ್ತು ನಡೆದಿದ್ದರು.

ಫ್ಯೂಂಟಿಸಿನ ಬಳಿ ನಾವು ಐವತ್ತು-ಅರವತ್ತು ಗಿನೀ ಕೋಳಿಗಳ ದೊಡ್ಡ ಹಿಂಡೊಂದನ್ನು ಕಂಡೆವು. ಅವು ಎಷ್ಟು ಚುರುಕಾಗಿದ್ದುವೆಂದರೆ ನಮಗೆ ಹತ್ತಿರ ಹೋಗಿ ನೋಡಲು ಆಗಲೇ ಇಲ್ಲ. ಸೆಪ್ಟೆಂಬರಿನ ಮಳೆಗಾಲದಲ್ಲಿ ಪಾರ್ಟರಿಜ್ ಹಕ್ಕಿಗಳು ಮಾಡುವಂತೆ ತಲೆಯನ್ನು ಮೇಲೆ ಕೊಂಕಿಸಿಕೊಂಡು ನಮ್ಮನ್ನು ತಪ್ಪಿಸಿಕೊಂಡು ಓಡುತ್ತಿದ್ದುವು. ಅಟ್ಟಿಸಿಕೊಂಡು ಹೋದರೆ ಹಾರಿ ಬಿಡುತ್ತಿದ್ದುವು.

ಸೈಂಟ್ ಡೊಮಿಂಗೋದ ನೋಟ ಸೌಂದರ್ಯ ಅಚ್ಚರಿಗೊಳಿಸುವಷ್ಟು ಭಿನ್ನವಾಗಿತ್ತು. ದ್ವೀಪದ ಉಳಿದ ಭಾಗದಲ್ಲಿದ್ದ ವಿಷಾದದ ಛಾಯೆ ಇಲ್ಲಿರಲಿಲ್ಲ. ಎತ್ತರವಾದ ಹಾಗೂ ಚೂಪು-ಚೂಪಾದ ಕಲ್ಲುಗಳಿರುವ ಲಾವಾ ಪದರಗಳ ಕಣಿವೆಯ ತಳದಲ್ಲಿ ಈ ಹಳ್ಳಿ ಇದೆ. ಅಲ್ಲಿ ಹರಿಯುತ್ತಿದ್ದ ಕಿರುತೊರೆಯ ದಂಟೆಗುಂಟ ಆವರಿಸಿದ್ದ ಮಿರುಗುವ ಹಸಿರಿನ ವೈದೃಶ್ಯ ಅದನ್ನು ಸುತ್ತುವರಿದ ಕಪ್ಪು ಲಾವಾಶಿಲೆಗಳಿಂದಾಗಿ ಎದ್ದು ಕಾಣುತ್ತಿತ್ತು. ಅವತ್ತು ಯಾವುದೋ ಹಬ್ಬದ ದಿನ. ಊರೆಲ್ಲ ಜನ ಜಂಗುಳಿ. ಅಲ್ಲಿಂದ ಮರಳುವಾಗ ನಾವು ಒಂದಿಪ್ಪತ್ತು ಕಪ್ಪು ಹುಡುಗಿಯರ ತಂಡವನ್ನು ಹಾದು ಮುನ್ನಡೆದೆವು. ಅವರೆಲ್ಲರೂ ಬಲು ಸೊಗಸಾಗಿ ದಿರಿಸು ಉಟ್ಟಿದ್ದರು. ಅವರ ಅಚ್ಚಕಪ್ಪು ದೇಹದ ಮೇಲೆ ಮಂಜಿನಂತಹ ಬಿಳುಪಿನ ಉಡುಪು, ಜೊತೆಗೆ ಬಣ್ಣ-ಬಣ್ಣದ ಪೇಟ ಮತ್ತು ದೊಡ್ಡ ಶಾಲುಗಳು. ನಾವು ಸಮೀಪಿಸುತ್ತಿದ್ದಂತೆಯೇ ಅವರೆಲ್ಲರೂ ನಮ್ಮತ್ತ ತಿರುಗಿ ರಸ್ತೆಯುದ್ದಕ್ಕೂ ಶಾಲನ್ನು ಹಾಸಿ, ತೊಡೆಯ ಮೇಲೆ ಚಪ್ಪಾಳೆ ಹೊಡೆಯುತ್ತಾ ಹಾಡೊಂದನ್ನು ಉತ್ಸಾಹದಿಂದ ಹಾಡಿದರು. ನಾವು ಅವರತ್ತ ಕೆಲವು ವಿಂಟೆಮ್ಮು (ಪೋರ್ತುಗಲ್ಲರ ಕಾಸು) ಎಸೆದೆವು. ನಗುತ್ತ, ಕಿರುಚಾಡುತ್ತ ಅದನ್ನು ಅವರು ಸ್ವೀಕರಿಸಿದರು. ನಾವು ಅಲ್ಲಿಂದ ಹೊರಟಾಗ ಅವರ ಹಾಡು-ಕೂಗಾಟ ಇಮ್ಮಡಿಯಾಗಿತ್ತು.

ಒಂದು ಬೆಳಗ್ಗೆ ನೋಟ ಬಲು ನಿಚ್ಚಳವಾಗಿತ್ತು.  ಅಚ್ಚ ನೀಲಿ ಬಣ್ಣದ ಮೋಡಗಳ ದಡದಲ್ಲಿ ಬರೆದ ರೇಖೆಗಳಂತೆ ದೂರದಲ್ಲಿದ್ದ ಪರ್ವತಗಳ ಅಂಚುಗಳೆಲ್ಲವೂ ಸುಸ್ಪಷ್ಟವಾಗಿ ಕಾಣುತ್ತಿದ್ದುವು. ಇಂಗ್ಲೆಂಡಿನ ಹಾಗೂ ಇನ್ನಿತರ ಕಡೆಗಳಲ್ಲಿನ ಅನುಭವಗಳ ಆಧಾರದ ಮೇಲೆ ಗಾಳಿ ತೇವಾಂಶದಿಂದ ಆರ್ದ್ರವಾಗಿರಬೇಕು ಎಂದು ಊಹಿಸಿದೆ. ಆದರೆ ವಾಸ್ತವ ಬೇರೆಯದೇ ಆಗಿತ್ತು. ವಾತಾವರಣದ ಉಷ್ಣತೆ ಹಾಗೂ ನೀರು ಹನಿಗಟ್ಟುವ ಉಷ್ಣತೆಯ ನಡುವೆ 29.6 ಡಿಗ್ರೀಗಳ ವ್ಯತ್ಯಾಸವಿದೆ ಎಂದು ಆರ್ದ್ರತಾ ಮಾಪಕ ಸೂಚಿಸಿತು. ಇದು ಹೆಚ್ಚೂ ಕಡಿಮೆ ಅದಕ್ಕೂ ಮುಂಚಿನ ದಿನಗಳಲ್ಲಿ ನಾನು ಕಂಡಿದ್ದ ವ್ಯತ್ಯಾಸದ ದುಪ್ಪಟ್ಟು ಇತ್ತು. ವಾತಾವರಣದ ಈ ಶುಷ್ಕತೆಯ ಜೊತೆಗೆ ಎಡೆಬಿಡದೆ ಮಿಂಚು ಕೂಡ ಕೋರೈಸುತ್ತಿತ್ತು. ಇಂತಹ ಹವಾಗುಣವಿರುವ ಸಂದರ್ಭಗಳಲ್ಲಿ ಎಲ್ಲವೂ ನಿಚ್ಚಳವಾಗಿರುವುದು ತುಸು ಅಪರೂಪವೇ ಅಲ್ಲವೇ?

ಸಾಮಾನ್ಯವಾಗಿ ಇಲ್ಲಿನ ವಾತಾವರಣ ಮಸುಕಾಗಿರುತ್ತಿತ್ತು. ಅತಿ ಸಣ್ಣ ದೂಳು ಬಿದ್ದು ಹೀಗಾಗುತ್ತಿತ್ತು. ಇದು ಖಗೋಳ ವೀಕ್ಷಣೆಯ ಸಾಧನಗಳನ್ನೂ ಹಾಳುಗೆಡವಿತ್ತು. ಪ್ರಾಯಾ ಬಂದರಿನಲ್ಲಿ ಲಂಗರು ಹಾಕುವ ಮುನ್ನಾದಿನ ಬೆಳಗ್ಗೆ ನಾನು ಕಂದು ಬಣ್ಣದ ಈ ನಯವಾದ ದೂಳನ್ನು ಒಂದಿಷ್ಟು ಸಂಗ್ರಹಿಸಿದ್ದೆ. ಕೂವೆಗೆ ಕಟ್ಟಿದ್ದ ಹಾಯಿಯ ಮೂಲಕ ಗಾಳಿ ಇದನ್ನು ಸೋಸಿದ ಹಾಗೆ ತೋರುತ್ತಿತ್ತು. ಈ ದ್ವೀಪಗಳ ಉತ್ತರಕ್ಕೆ ಸುಮಾರು ನಾಲ್ಕುನೂರು ಮೈಲಿಗಳ ದೂರದಲ್ಲಿ ಹಡಗಿನ ಮೇಲೆ ಬಿದ್ದ ದೂಳಿನ ನಾಲ್ಕು ಪೊಟ್ಟಣಗಳನ್ನು ಮಿ. ಲಯೆಲ್ ನನಗೆ ಕೊಟ್ಟಿದ್ದರು. ಪ್ರೊಫೆಸರ್ ಎಹ್ರೆನ್ ಬರ್ಗರಿಗೆ ಇದನ್ನು ಕಳಿಸಿದಾಗ ಆತ ಈ ದೂಳಿನಲ್ಲಿ ಬಹುಪಾಲು ಸಿಲಿಕಾಭರಿತ ಹುರುಪೆಗಳು ಹಾಗೂ ಸಿಲಿಕಾಭರಿತ ಗಟ್ಟಿಯಾದ ಸಸ್ಯಗಳ ಅಂಗಾಂಶವಿವೆ ಎಂದು ಗುರುತಿಸಿದರು.  ಈ ಐದು ಪುಟ್ಟ ಪೊಟ್ಟಣಗಳಲ್ಲಿ ಆತ ಏನಿಲ್ಲವೆಂದರೂ ಅರವತ್ತೇಳು ವಿಭಿನ್ನ ಜೀವಿರೂಪುಗಳನ್ನು ಗುರುತಿಸಿದ್ದರು! ಇವುಗಳಲ್ಲಿ ಎರಡು ಸಮುದ್ರ ಜೀವಿಗಳ ಹೊರತಾಗಿ ಉಳಿದೆಲ್ಲವೂ ಸಿಹಿನೀರಿನ ವಾಸಿಗಳವು. ಅಟ್ಲಾಂಟಿಕ ಸಾಗರದ ಮಧ್ಯೆ ಎಲ್ಲೋ ದೂರದಲ್ಲಿದ್ದಾಗಲೂ ಕನಿಷ್ಟ ಎಂದರೆ ಹದಿನೈದು ಇಂತಹ ಜೀವಿಯಂಶಗಳಿರುವ ದೂಳು ಹಡಗಿನಲ್ಲಿ ಬಂದು ಬೀಳುವುದನ್ನು ನಾನು ಕಂಡಿದ್ದೇನೆ. ಈ ದೂಳು ಬಿದ್ದಾಗಲೆಲ್ಲ ಬೀಸುವ ಗಾಳಿಯ ದಿಕ್ಕು ಹಾಗೂ ವಾಯುಮಂಡಲದಲ್ಲಿ ಅತಿ ಎತ್ತರಕ್ಕೆ ದೂಳನ್ನು ಕೊಂಡೊಯ್ಯುವ ಹರ್ಮಟ್ಟನ್ (ಅನುವಾದಕ: ನಮ್ಮ ಮುಂಗಾರಿನಂತೆಯೇ ಆಫ್ರಿಕಾದ ಸಹಾರದಲ್ಲಿ ನಿಯತವಾದ ಋತುಗಳಲ್ಲಿ ಬೀಸುವ ಒಂದು ಮಾರುತ) ಬೀಸುವ ಕಾಲದಲ್ಲಿಯೇ ಈ ದೂಳು ಬಂದು ಬೀಳುವುದನ್ನೂ ಗಮನಿಸಿದರೆ ಇದು ಆಫ್ರಿಕಾದಿಂದಲೇ ಬರುತ್ತದೆ ಎಂದು ನಾವು ಅಂದುಕೊಳ್ಳಬಹುದು. ಆದರೆ ಆಫ್ರಿಕಾಗಷ್ಟೆ ಸೀಮಿತವಾದ ಹಲವು ವಿಶಿಷ್ಟ ಜೀವಿಯಂಶಗಳ ಅರಿವು ಇರುವ ಪ್ರೊಫೆಸರಿಗೆ ಈ ದೂಳಿನಲ್ಲಿ ಅವು ಯಾವುವೂ ಸಿಗಲಿಲ್ಲ ಎನ್ನುವುದು ವಿಚಿತ್ರವಾದ ಸತ್ಯ. ಆದರೆ ಇವುಗಳಲ್ಲಿ ಆತನಿಗೆ ತಿಳಿದ ದಕ್ಷಿಣ ಅಮೆರಿಕೆಯಲ್ಲಿ ಜೀವಿಸುವ ಎರಡು ಜೀವಿಗಳ ಅಂಶಗಳು ಇವುಗಳಲ್ಲಿ ಆತನಿಗೆ ಕಂಡಿವೆ. ಹಡಗಿನಲ್ಲಿರುವ ಎಲ್ಲವನ್ನೂ ಮುಸುಕುವಷ್ಟು ಭಾರೀ ಪ್ರಮಾಣದಲ್ಲಿ ದೂಳು ಬೀಳುತ್ತದೆ. ಕಣ್ಣುಗಳನ್ನೂ ಇದು ಉರಿಸುವುದುಂಟು. ಕೆಲವೊಮ್ಮೆ ಇದು ಎಷ್ಟು ದಟ್ಟವಾಗಿರುತ್ತದೆಂದರೆ ಹಡಗುಗಳು ದಾರಿಕಾಣದೆ ತೀರಕ್ಕೆ ಬಂದು ಬಡಿದುದೂ ಉಂಟು. ಹಡಗುಗಳು ಆಫ್ರಿಕಾದಿಂದ ನೂರಾರು ಏಕೆ ಸಾವಿರ ಮೈಲುಗಳಿಗಿಂತ ದೂರದಲ್ಲಿದ್ದಾಗ ಹಾಗೂ ಉತ್ತರ-ದಕ್ಷಿಣವಾಗಿ ಸುಮಾರು 1600 ಮೈಲಿ ದೂರದಲ್ಲಿದ್ದಾಗಲೂ ಈ ದೂಳು ಬಂದು ಬಿದ್ದುದುಂಟು. ತೀರದಿಂದ ಮುನ್ನೂರ ಮೈಲಿ ದೂರದಲ್ಲಿದ್ದ ಹಡಗಿನಲ್ಲಿ ಬಿದ್ದ ದೂಳನ್ನು ಹೆಕ್ಕಿದಾಗ ಅದರಲ್ಲಿ ಅಂಗುಲದ ಸಾವಿರದೊಂದಂಶಕ್ಕಿಂತಲೂ ದೊಡ್ಡ ಗಾತ್ರದ ಕಲ್ಲುಗಳು ಅತಿ ನಯವಾದ ದೂಳಿನಲ್ಲಿ  ಬೆರೆತಿರುವುದನ್ನು ಕಂಡು ನಾನು ಬೆರಗಾಗಿದ್ದೂ ಉಂಟು. ಇಷ್ಟು ಹೇಳಿದ ಮೇಲೆ ಇದಕ್ಕಿಂತಲೂ ಸಣ್ಣಗಿನ ಹಾಗೂ ಹಗುರವಾಗಿರುವ ಸಸ್ಯಗಳ ಗುಪ್ತಬೀಜಗಳನ್ನು ದೂಳಿನಲ್ಲ ಕಂಡಾಗ ಅಚ್ಚರಿ ಪಡಬೇಕಿಲ್ಲ. ಅಲ್ಲವೇ?

ಈ ದ್ವೀಪದ ಭೂಲಕ್ಷಣಗಳು ಅದರ ಪ್ರಾಕೃತಿಕ ಚರಿತ್ರೆಯ ಬಲು ಕೌತುಕಮಯವಾದ ಅಂಶವಾಗಿವೆ. ಬಂದರನ್ನು ಪ್ರವೇಶಿಸುತ್ತಿದ್ದಂತೆ ಎದುರಿನ ಕಡಿದಾದ ಬಂಡೆಯ ಮುಖದಲ್ಲಿ, ತೀರದುದ್ದಕ್ಕೂ ಹಲವು ಮೈಲಿಗಳ ದೂರದವರೆಗೆ ಬಿಳಿಯದೊಂದು  ಗೆರೆಯು ನೀರಿನ ಮೇಲೆ ಸುಮಾರು ನಲವತ್ತೈದು ಅಡಿ ಎತ್ತರದಲ್ಲಿ ಅಡ್ಡವಾಗಿ ಸಾಗಿರುವುದನ್ನು ನಾವು ಕಾಣಬಹುದು. ಪರೀಕ್ಷಿಸಿದಾಗ ಈ ಬಿಳಿಯ ಪದರದಲ್ಲಿ ಹಲವಾರು ಕಪ್ಪೆಚಿಪ್ಪುಗಳು ಹುದುಗಿದ ಸುಣ್ಣದ ವಸ್ತು ಇರುವುದನ್ನು ಕಾಣಬಹುದು. ಈ ಚಿಪ್ಪುಗಳ ಜೀವಿಗಳಲ್ಲಿ ಬಹುತೇಕ ಏಕೆ ಎಲ್ಲವನ್ನೂ ಈಗಲೂ ನೆರೆಯ ಸಮುದ್ರ ತೀರದಲ್ಲಿ ಹೆಕ್ಕಬಹುದು.  ಇದು ಹಳೆಯ ಜ್ವಾಲಾಮುಖಿಯ ದಿಕ್ಕಿಗೆ ಮುಖಮಾಡಿಕೊಂಡಿದೆ.

ಅದು ಜ್ವಾಲಾಮುಖಿಗಳಿಂದಾದ ಶಿಲೆಯ ಮೇಲಿದೆ ಹಾಗೂ ಬಸಾಲ್ಟು ಪ್ರವಾಹದಿಂದಾದ ಶಿಲೆ ಅದನ್ನು ಆವರಿಸಿದೆ. ಆ ಬಿಳಿಯ ಚಿಪ್ಪುಗಳ ಹಾಸಿಗೆ ಸಮುದ್ರದ ತಳದಲ್ಲಿದ್ದಾಗ ಈ ಬಸಾಲ್ಟು ಪ್ರವಾಹ ಅದರ ಮೇಲೆ ಹರಿದಿರಬೇಕು. ಬಿಸಿ ಲಾವಾ ರಸ ಮೇಲೆ ಬಿದ್ದಾಗ ಈ ಪುಡಿಪುಡಿಯಾಗಬಲ್ಲ ವಸ್ತುವಿನಲ್ಲಿ ಕೌತುಕಮಯವಾದ ಬದಲಾವಣೆಗಳನ್ನು ತಂದಿರುವುದನ್ನು ಕಾಣಬಹುದು. ಕೆಲವೆಡೆ ಅದು ಹರಳಿನ ರೂಪ ಸುಣ್ಣವಾಗಿಯೂ ಇನ್ನು ಕೆಲವೆಡೆ ಬಿಳಿ ಚುಕ್ಕೆಗಳಿರುವ ಗಟ್ಟಿ ಶಿಲೆಯಾಗಿಯೂ ಮಾರ್ಪಾಟಾಗಿದೆ. ಪ್ರವಾಹದ ತಳದಲ್ಲಿರುವ ಪೊಳ್ಳುಗುಳ್ಳೆಗಳಂತಹ ಶಿಲೆಗಳಲ್ಲಿ ಸಿಲುಕಿದ ಸುಣ್ಣ ಸುಂದರವಾದ ಚಕ್ರದ ಅರೆಗಳಿರುವಂತೆ ಬೆಳ್ಳಗಿನ ರೇಖೆಗಳಾಗಿ ಅರಾಗೊನೈಟು ಶಿಲೆಯನ್ನು ಹೋಲುತ್ತದೆ. ಲಾವಾದ ಪದರಗಳು ಒಳಭಾಗಕ್ಕೆ ಹಂತ, ಹಂತವಾಗಿ ಇಳುಕಲಿರುವ ಮೈದಾನಗಳಾಗಿ ರೂಪುಗೊಂಡಿವೆ. ಇಲ್ಲಿಂದ ಮುಂದೆ ಕರಗಿದ ಕಲ್ಲಿನ ಪ್ರವಾಹವೇ ಇದೆ. ಸೈಂಟ್ ಜಾಗೋದ ಯಾವುದೇ ಪ್ರದೇಶದಲ್ಲಿಯೂ ಇತ್ತೀಚಿನ ಚರಿತ್ರಕಾಲದಲ್ಲಿ ಎಂದೂ ಜ್ವಾಲಾಮುಖಿಯ ಚಟುವಟಿಕೆಗಳಾದ ಕುರುಹುಗಳಿವೆ ಎಂದು ನಾನು ನಂಬುವುದಿಲ್ಲ. ಅಲ್ಲಿನ ಕೆಂಡದಂತಹ ಕೆಂಪು ಬೆಟ್ಟಗಳ ಶಿಖರಗಳಲ್ಲೂ ಕ್ರೇಟರುಗಳು ಅಪರೂಪವೇ. ಆದರೂ ಇತ್ತೀಚಿನ ಶಿಲಾಪ್ರವಾಹಗಳನ್ನು ಗುರುತಿಸಬಹುದು. ಸಮುದ್ರ ತೀರದುದ್ದಕ್ಕೂ ತಮಗಿಂತಲೂ ಪುರಾತನವಾದ ಶಿಲಾಗೋಡೆಗಳ ಮುಂದೆ ತುಸು ಕಡಿಮೆ ಎತ್ತರವಿರುವ ಕಡಿದಾದ ಗೋಡೆಗಳಾಗಿ ಇವು ಕಾಣುತ್ತವೆ. ಇವುಗಳ ಎತ್ತರದಿಂದಲೇ ಇವೆಷ್ಟು ಹೊಸದೆಂದು ಅಂದಾಜಿಸಬಹುದು.

ನಾವಲ್ಲಿದ್ದಾಗ ಹಲವು ಸಾಗರಜೀವಿಗಳನ್ನೂ ನಾನು ಗಮನಿಸಿದೆ. ದೊಡ್ಡದಾದ ಅಪ್ಲೀಶಿಯ ಅಲ್ಲಿ ಬಲು ಸಾಮಾನ್ಯ. ಮಾಸಲು ಹಳದಿ ಬಣ್ಣದ ಈ ಗೊಂಡೆಹುಳು ಜಾತಿಯ ಸಮುದ್ರ ಜೀವಿ ಐದು ಅಂಗುಲ ಉದ್ದವಿದೆ. ಅಲ್ಲಲ್ಲಿ ನೇರಳೆ ಗೆರೆಗಳಿವೆ. ಇದರ ತಳಭಾಗ ಅಂದರೆ ಪಾದದ ಎರಡೂ ಬದಿಯಲ್ಲಿಯೂ ಅಗಲವಾದ ಪೊರೆಗಳಿವೆ. ಇವು ಬೀಸಣಿಕೆಯಂತೆ ಬೀಸಿ ಹುಳುವಿನ ಬೆನ್ನ ಮೇಲೆ ನೀರಿನ ಪ್ರವಾಹ ಹರಿಯುವಂತೆ ಮಾಡುತ್ತವೆ. ಅಲ್ಲಿನ ಆಳವಿಲ್ಲದ ಕೆಸರು ನೀರಿನಲ್ಲಿ ಬೆಳೆಯುವ ಸಮುದ್ರಸಸ್ಯಗಳನ್ನು ತಿನ್ನುತ್ತದೆ. ಹಕ್ಕಿಗಳ ನಡುಹೊಟ್ಟೆಯಲ್ಲಿ ಕಾಣುವಂತೆ ಇದರ ಹೊಟ್ಟೆಯಲ್ಲಿಯೂ ನಾನು ಹಲವು ಸಣ್ಣ ಸಣ್ಣ ಉರುಟುಕಲ್ಲುಗಳನ್ನೂ ಕಂಡೆ.  ತೊಂದರೆಯಾದಾಗ ಈ ಗೊಂಡೆಹುಳುವು ಕೆಂಪು-ನೇರಳೆ ಬಣ್ಣದ ದ್ರವವನ್ನು ಸೂಸುತ್ತದೆ. ಇದರಿಂದಾಗಿ ಸುತ್ತಲಿನ ಒಂದಡಿಯಳತೆಯ ಜಾಗವೆಲ್ಲವೂ ಬಣ್ಣ ಬಣ್ಣವಾಗಿಬಿಡುವುದು.  ರಕ್ಷಣೆಯ ಈ ವಿಧಾನವಲ್ಲದೆ ಅದು ತನ್ನ ಮೈಮೇಲೆಲ್ಲ ಸುರಿದುಕೊಳ್ಳುವ ಕೆಟ್ಟ ವಾಸನೆಯ ದ್ರವವು ಪೋರ್ಚುಗೀಸ್ ಮ್ಯಾನ್ ಆಫ್ ವಾರ್ ಜೀವಿಯು ತಾಕಿದಾಗ ಉಂಟಾಗುವಂತಹ ಕಡಿತ ಹಾಗೂ ಉರಿಯನ್ನು ಉಂಟು ಮಾಡುತ್ತದೆ.

ಹಲವೊಮ್ಮೆ ಅಷ್ಟಪದಿಯ ಇಲ್ಲವೇ ಕಟಲ್ ಮೀನು (ಬಸವನಹುಳುವಿನ ಜಾತಿಗೇ ಸೇರಿದ ನೊರೆ ಮೂಳೆ ಇರುವ ಸಮುದ್ರಜೀವಿ) ವಿನ ಚಲನವಲನಗಳನ್ನು ಗಮನಿಸುವುರಲ್ಲಿ ಮಗ್ನನಾಗಿರುತ್ತಿದ್ದೆ. ಹಿನ್ನಡೆಯುತ್ತಿದ್ದ ಉಬ್ಬರದಲೆಗಳು ಬಿಟ್ಟು ಹೋಗುತ್ತಿದ್ದ ಸಣ್ಣ, ಸಣ್ಣ ನೀರಿನ ಹೊಂಡಗಳಲ್ಲಿ ಇವು ಸಾಮಾನ್ಯವಾಗಿ ಕಾಣುತ್ತಿದ್ದುವು. ಆದರೆ ಇವನ್ನು ಹಿಡಿಯುವುದು ಸುಲಭವಲ್ಲ. ಅವು ತಮ್ಮ ಉದ್ದನೆಯ ಬಾಹುಗಳನ್ನು ಬಳಸಿ ಅವು ಅತಿ ಕಿರಿದಾದ ಸಂದುಗಳೊಳಗೂ ನುಸುಳಿಬಿಡುತ್ತಿದ್ದುವು. ಹೀಗೆ ಭದ್ರವಾಗಿ ನೆಟ್ಟುಕೊಂಡ ಅವನ್ನು ಹೊರತೆಗೆಯಲು ಪ್ರಯತ್ನಿಸಿದರೆ ಶರವೇಗದಿಂದ ಹೊಂಡದ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಿಬಿಡುತ್ತವೆ. ಅದೇ ಕ್ಷಣದಲ್ಲಿ ಕಂದುಗಪ್ಪು ಬಣ್ಣದ ಶಾಯಿಯನ್ನು ಸುರಿಸಿ ಕ್ಷಣಾರ್ಧದಲ್ಲಿ ನೀರನ್ನೆಲ್ಲ ಬಣ್ಣಗೆಡಿಸಿಬಿಡುತ್ತವೆ.  ತಾವು ಚಲಿಸುತ್ತಿರುವ ನೆಲದ ಬಣ್ಣವನ್ನೇ ಹೋಲುವಂತೆ ಬಣ್ಣವನ್ನು ಅವು ಬದಲಿಸುವಂತೆ ತೋರುತ್ತದೆ. ನೀರಿನ ಆಳದಲ್ಲಿದ್ದಾಗ ಅವುಗಳ ಬಣ್ಣ ಸಾಮಾನ್ಯವಾಗಿ ಕಂದು ಮಿಶ್ರಿತ ನೇರಳೆ. ಆದರೆ ನೆಲದ ಮೇಲೋ ಅಥವಾ ಆಳವಿಲ್ಲದ ಜಾಗದಲ್ಲಿಯೋ ಇರಿಸಿದಾಗ ಅವು ತೆಳು ಹಸಿರು-ಹಳದಿ ಬಣ್ಣವಾಗುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ನೂರಾರು ಹಳದಿ ಬಣ್ಣದ ಚುಕ್ಕೆಗಳಿರುವ ಫ್ರೆಂಚ್ ಗ್ರೇ (ತೆಳು ಬೂದು) ಬಣ್ಣವಾಗಿ ತೋರುತ್ತದೆ.  ಬೂದು ಬಣ್ಣದ ಪ್ರಖರತೆ ವ್ಯತ್ಯಾಸವಾಗುತ್ತಿರುತ್ತದೆ. ಹಳದಿ ಚುಕ್ಕೆಗಳು ಒಮ್ಮೆ ಕಾಣಿಸಿ, ಇನ್ನೊಮ್ಮೆ ಕಾಣೆಯಾಗುತ್ತಿರುತ್ತವೆ. ಈ ಬದಲಾವಣೆಗಳು ಎಷ್ಟು ಕ್ಷಿಪ್ರವಾಗಿದ್ದುವು ಎಂದರೆ ಅವುಗಳ ದೇಹದ ಮೇಲೆ ತೆಳುಗೆಂಪಿನಿಂದ ಕಂದುಗಪ್ಪಿನ ಮೋಡಗಳು ಆವರಿಸಿಕೊಂಡಂತೆ  ತೋರುತ್ತದೆ. ಅವುಗಳ ಯಾವುದೇ ಭಾಗವು ತುಸು ಅಲುಗಾಡಿಸಿದ ಕೂಡಲೇ ಗಾಢ ಕಪ್ಪಾಗಿ ಬಿಡುತ್ತಿದ್ದುವು. ಅವುಗಳ ಚರ್ಮವನ್ನು ಸೂಜಿಯಿಂದ ಗೀರಿದಾಗಲೂ ಇದೇ ಪರಿಣಾಮ, ಆದರೆ ತುಸು ಲಘುವಾಗಿ ಕಾಣುತ್ತಿತ್ತು. ಬ್ಲಷ್ ಎಂದು ಕರೆಯುವ ಈ ಮೋಡಗಳು ದೇಹದಲ್ಲಿರುವ ದ್ರವ ತುಂಬಿದ ಸೂಕ್ಷ್ಮ ಚೀಲಗಳು ಹಿಗ್ಗಿ, ಕುಗ್ಗುವುದರಿಂದ ಉಂಟಾಗುತ್ತಿವೆ ಎನ್ನಬಹುದು.

ಈ ಕಟಲ್ ಮೀನೋ ತಳದಲ್ಲಿ ಶಿಲೆಯಂತಿರುವಾಗಲೂ, ಈಜುವಾಗಲೂ ಗೋಸುಂಬೆಯಂತಹ ಬಣ್ಣ ಬದಲಿಸುವ ಸಾಮರ್ಥ್ಯವನ್ನು ತೋರುತ್ತಿತ್ತು. ಅದರಲ್ಲಿ ಒಂದು ತಪ್ಪಿಸಿಕೊಳ್ಳಲು ಬಳಸಿದ ಯುಕ್ತಿಗಳು ನನಗೆ ಮೋಜೆನ್ನಿಸಿತು. ನಾನು ಅದನ್ನು ಗಮನಿಸುತ್ತಿದ್ದೇನೆಂಬುದರ ಅರಿವು ಅದಕ್ಕೆ ಇದ್ದಂತಿತ್ತು. ಸ್ವಲ್ಪ ಸಮಯ ಕದಲದೆ ನಿಂತಿರುತ್ತಿದ್ದ ಅದು ಮೆಲ್ಲನೆ ಇಲಿಯ ಹಿಂದೆ ಕಳ್ಳನಂತೆ ಹೋದ ಬೆಕ್ಕಿನ ಹಾಗೆ ಒಂದೆರಡು ಅಂಗುಲ ಮುಂದೆ ಸರಿಯುತ್ತಿತ್ತು. ಕೆಲವೊಮ್ಮೆ ಬಣ್ಣವನ್ನೂ ಬದಲಿಸುತ್ತಿತ್ತು. ಹೀಗೆ ಸ್ವಲ್ಪ ಆಳದ ನೀರಿರುವ ಜಾಗೆಯವರೆಗೂ ಸಾಗಿದ ಅದು ತಟಕ್ಕನೆ ಸುಯ್ಯೆಂದು ಸಾಗಿ ತನ್ನ ಬಿಲದೊಳಗೆ ನುಸುಳುತ್ತಿತ್ತು. ತನ್ನ ಜಾಡಿನಲ್ಲಿ ಅದು ಕಪ್ಪನೆಯ ಶಾಯಿಯನ್ನು ಸುರಿದು ಬಿಲದ ಬಾಯಿಯನ್ನು ಮರೆಮಾಡಿಬಿಡುತ್ತಿತ್ತು.

ಕಡಲಜೀವಿಗಳಿಗಾಗಿ ಹುಡುಕಾಡುತ್ತಿದ್ದಾಗ ನಾನು ತಲೆಯನ್ನು ಕಲ್ಲುತುಂಬಿದ ಆ ತೀರದಿಂದ ಒಂದೆರಡು ಅಡಿ ಮೇಲಿಟ್ಟುಕೊಂಡಿರುತ್ತಿದ್ದೆ. ಹಲವಾರು ಬಾರಿ ನನಗೆ ನೀರಿನ ಚಿಲುಮೆಯ ಸಲಾಮು ಕೂಡ ಸಿಕ್ಕಿತ್ತು. ಅದರ ಜೊತೆಗೆ ಗುರುಗುಟ್ಟುವ ಶಾಪವೂ. ಮೊದಮೊದಲು ಅದೇನಿರಬಹುದೆಂದು ನನಗೆ ತಿಳಿಯಲಿಲ್ಲ. ಅದು ಕಲ್ಲಿನ ಪೊಟರೆಯೊಳಗೆ ಅವಿತಿದ್ದ ಈ ಕಟಲ್ ಮೀನಿನ ಕರಾಮತ್ತು ಎಂದು ತಿಳಿಯಿತು. ಹೀಗೆ ಅದು ಬಚ್ಚಿಟ್ಟುಕೊಂಡಿದ್ದರೂ ನಾನು ಅದನ್ನು ಅನ್ವೇಷಿಸಿಬಿಡುತ್ತಿದ್ದೆ. ಅದು ನೀರನ್ನು ಚಿಲುಮೆಯಂತೆ ಚಿಮ್ಮಬಲ್ಲುದು ಎನ್ನುವುದರಲ್ಲಿ ಅನುಮಾನ ಬೇಡ. ದೇಹದ ತಳದಲ್ಲಿರುವ ಕೊಳವೆಯನ್ನು ಅದು ಗುರಿಯಿಟ್ಟು ನೀರನ್ನು ಚಿಮ್ಮುತ್ತದೆ ಎಂದು ನನಗೆ ತೋರಿತು. ಅವುಗಳಿಗೆ ತಮ್ಮ ತಲೆಯನ್ನೆತ್ತಿಟ್ಟುಕೊಳ್ಳುವುದು ಕಷ್ಟವಾಗುವುದರಿಂದ ಸಪಾಟಾದ ನೆಲದ ಮೇಲೆ ಇಟ್ಟಾಗ ಇವು ಮೆಲ್ಲನೆ ತೆವಳಬಹುದಾಗಿತ್ತು ಅಷ್ಟೆ. ನನ್ನ ಕ್ಯಾಬಿನ್ನಿನಲ್ಲಿ ನಾನು ತಂದಿಟ್ಟುಕೊಂಡಿದ್ದ ಒಂದು ಜೀವಿ ರಾತ್ರಿ ತುಸು ಮಿನುಗುತ್ತಿದ್ದುದನ್ನು ಕಂಡಿದ್ದೆ.

ಸೈಂಟ್ ಪಾಲ್ ಕಲ್ಲುಗಳು: ಫೆಬ್ರವರಿ 16, 1832ರಂದು ನಾವು ಅಟ್ಲಾಂಟಿಕ್ ಸಾಗರವನ್ನು ದಾಟುವಾಗ ಸೈಂಟ್ ಪಾಲನ ದ್ವೀಪಗಳಿಗೆ ಬಲು ಸಮೀಪದಿಂದಲೇ ಹೋದೆವು. ಈ ಕಲ್ಲುಗಳ ರಾಶಿಯು 0° 58′ ಉತ್ತರ ಅಕ್ಷಾಂಶ ಹಾಗೂ 29° 15′ ಪಶ್ಚಿಮ ರೇಖಾಂಶದಲ್ಲಿದೆ.  ಅದು ಅಮೆರಿಕೆಯ ತೀರದಿಂದ ಸುಮಾರು 540 ಮೈಲಿಗಳಷ್ಟು ಹಾಗೂ  ಫರ್ನಾಂಡೊ ನೊರೊನ್ಹಾ ದ್ವೀಪದಿಂದ ಸುಮಾರು 350 ಮೈಲಿ ದೂರದಲ್ಲಿದೆ. ಅದರ ಅತಿ ಎತ್ತರದ ಸ್ಥಾನವು ಸಮುದ್ರ ಮಟ್ಟದಿಂದ ಕೇವಲ 50 ಅಡಿ ಮೇಲಿದೆ.  ಇಡೀ ದ್ವೀಪದ ಸುತ್ತಳತೆ ಸುಮಾರು ಮುಕ್ಕಾಲು ಮೈಲಿ ಇರಬಹುದು ಅಷ್ಟೆ. ಈ ಪುಟ್ಟ ಬಿಂದುವು ಸಮುದ್ರದಲ್ಲಿ ಅಚಾನಕ್ಕಾಗಿ ಎದುರಾಗುತ್ತದೆ. ಆದರೆ ಅದರ ಖನಿಜ ಸ್ವರೂಪ ಸರಳವಾದದ್ದೇನಲ್ಲ.

 

ದ್ವೀಪದ ಕೆಲವು ಭಾಗದಲ್ಲಿ ಚೆರ್ಟಿ ಇದೆ. ಇನ್ನು ಕೆಲವು ಭಾಗಗಳಲ್ಲಿ  ಹಾವಿನಂತಹ ಗೆರೆಗಳಿರುವ ಫೆಲ್ಡ್ಸ್ಪಾತ್ ಇದೆ. ಹೀಗೆ ಶಾಂತಸಾಗರ, ಅಟ್ಲಾಂಟಿಕ ಹಾಗೂ ಹಿಂದೂ ಮಹಾಸಾಗರದಲ್ಲಿ ಕರಾವಳಿಯಿಂದ ದೂರದಲ್ಲಿರುವ ಎಲ್ಲ ದ್ವೀಪಗಳೂ ಒಂದೋ ಹವಳದಿಂದಲೋ, ಅಥವಾ ಜ್ವಾಲಾಮುಖಿಯಿಂದ ಸಿಡಿದವುಗಳಿಂದ ಆದವುಗಳು. ಇದಕ್ಕೆ ಅಪವಾದವೆಂದರೆ ಸೀಶೆಲ್ಸ್ ದ್ವೀಪಗಳು ಹಾಗೂ ಈ ದ್ವೀಪ. ಈ ಸಾಗರದ್ವೀಪಗಳ ಜ್ವಾಲಾಮುಖಿಯ ಸ್ವರೂಪ ಈ ನಿಯಮದ ವಿಸ್ತರಣೆಯಷ್ಟೆ. ರಾಸಾಯನಿಕವೋ, ಭೌತಿಕವೋ ಅವುಗಳ ನಿರ್ಮಾಣಕ್ಕೆ ಕಾರಣ ಯಾವುದೇ ಇರಲಿ, ಪರಿಣಾಮ ಮಾತ್ರ ಇಂದು ಚಟುವಟಿಕೆಯಿಂದಿರುವ ಬಹುತೇಕ ಜ್ವಾಲಾಮುಖಿಗಳು ಒಂದೋ ಕರಾವಳಿಗೆ ಸಮೀಪದಲ್ಲಿ ಇರುತ್ತವೆ. ಇಲ್ಲವೇ ಸಮುದ್ರ ಮಧ್ಯದಲ್ಲಿ ದ್ವೀಪಗಳಾಗಿರುತ್ತವೆ.

ದೂರದಿಂದ ನೋಡಿದಾಗ ಸೈಂಟ್ ಪಾಲಿನ ಕಲ್ಲುಗಳು ಬೆಳ್ಳಗೆ ಹೊಳೆಯುತ್ತವೆ. ಇದು ಸ್ವಲ್ಪ ಮಟ್ಟಿಗೆ ಅವುಗಳನ್ನು ಆವರಿಸಿರುವ ಕಡಲಕೋಳಿಗಳ ಹಿಕ್ಕೆಯಿಂದಾಗಿಯೂ, ಸ್ವಲ್ಪ ಮಟ್ಟಿಗೆ ಆ ಕಲ್ಲುಗಳ ಮೇಲ್ಮೈಯನ್ನು ಅಂಟಿಕೊಂಡಿರುವ ಮುತ್ತಿನಂತೆ  ಗಟ್ಟಿ ಹಾಗೂ ನಯವಾದ ಹೊಳಪಿನ ವಸ್ತುವಿನಿಂದಾಗಿಯೂ ಹೀಗೆ ತೋರುತ್ತವೆ. ಈ ವಸ್ತುವನ್ನು ಭೂತಗನ್ನಡಿಯಿಂದ ಗಮನಿಸಿದರೆ ಅದರಲ್ಲಿ ಹಲವು ಬಲು ತೆಳುವಾದ ಪದರಗಳು ಇರುವುದು ತೋರುತ್ತದೆ. ಇಡೀ ಪದರದ ಒಟ್ಟಾರೆ ದಪ್ಪ ಅಂಗುಲದ ಹತ್ತನೆಯ ಒಂದಂಶವಾಗಬಹುದು. ಅದರಲ್ಲಿ ಹೆಚ್ಚಾಗಿ ಇರುವುದು ಜೀವಿಗಳ ಅಂಶವೇ. ಅದಕ್ಕೆ ಮೂಲ ಆ ಹಕ್ಕಿಗಳ ಹಿಕ್ಕೆಯ ಮೇಲೆ ಸುರಿದ ಮಳೆ ಇಲ್ಲವೇ ಸಾಗರದ ಉಪ್ಪು ನೀರಿನ ಕ್ರಿಯೆಯೇ ಎನ್ನುವುದು ನಿಸ್ಸಂದೇಹ. ಅಸೆಂಶನ್ ಹಾಗೂ ಅಬ್ರೊಲೋಸ್ ನಡುಗಡ್ಡೆಗಳಲ್ಲಿ ಅಲ್ಲಲ್ಲಿ ಗುಪ್ಪೆಯಾಗಿ ಕರೆಗಟ್ಟಿದ ಹಿಕ್ಕೆಯ (ಇವನ್ನು ಗ್ವಾನೊ ಎಂದು ಕರೆಯುವರು) ಬುಡದಲ್ಲಿ ಶಾಖೆಯೊಡೆದ ಸುಣ್ಣಗಲ್ಲಿನಂತಹವು ಇದ್ದುವು. ಇವು ಕೂಡ ಆ ಕಲ್ಲುಗಳ ಮೇಲಿದ್ದ ಬಿಳಿಯ ಪದರದಂತೆಯೇ ರೂಪುಗೊಂಡಿರಬೇಕು. ಹೀಗೆ ಶಾಖೆಯೊಡೆದ ವಸ್ತುಗಳು ನೋಡಲು ಸುಣ್ಣದಂಶವಿರುವ ಗಟ್ಟಿ ದೇಹದ ಸಾಗರಸಸ್ಯಗಳನ್ನು ಹೋಲುತ್ತಿದ್ದುವಾದ್ದರಿಂದ ಇವುಗಳನ್ನು ಆತುರದಲ್ಲಿ ಗಮನಿಸಿದ ನನಗೆ ಅಷ್ಟೇನೂ ವ್ಯತ್ಯಾಸ ಗೊತ್ತಾಗಲಿಲ್ಲ. ಶಾಖೆಗಳ ತುದಿಯಲ್ಲಿದ್ದ ಗುಬುಟುಗಳು ಮುತ್ತಿನಂತೆಯೇ ನಯವಾಗಿ, ಹಲ್ಲಿನ ಮೇಲಿರುವ ಎನಾಮೆಲ್ಲಿನಂತೆ ಇದ್ದುವು. ಇವನ್ನು ಗೀರುವುದು ಗಾಜಿನ ಹಾಳೆಯನ್ನು ಗೀರುವಷ್ಟೆ ಕಠಿಣವಾಗಿತ್ತು.  ಅಸೆಂಶನ್ನಿನ ಕರಾವಳಿಯ ಒಂದು ಭಾಗದಲ್ಲಿ, ಮರಳನ್ನು ಕಪ್ಪೆಚಿಪ್ಪುಗಳು ಪೂರ್ತಿ ಆವರಿಸಿಕೊಂಡಿರುವ ಜಾಗದಲ್ಲಿ ಸಮುದ್ರದ ನೀರು ಅಲ್ಲಿನ ತೀರದ ಕಲ್ಲುಗಳ ಮೇಲೆ ಗಟ್ಟಿಯಾದ ಪದರವೊಂದನ್ನು ರಚಿಸಿರುವುದನ್ನು ಕಾಣಬಹುದು. ಇವು ತೇವವಾದ ಗೋಡೆಯ ಮೇಲೆ ಕಾಣಬರುವ ಮಾರ್ಕಾಂಶಿಯದಂತಹ ಕ್ರಿಪ್ಟೋಗ್ಯಾಮಿ (ಗುಪ್ತಬೀಜಿ) ಸಸ್ಯಗಳಂತೆ ತೋರುತ್ತಿದ್ದುವು. ಇವುಗಳ ಎಲೆಗಳ ಮೈ ನುಣುಪಾಗಿ ಹೊಳೆಯುತ್ತ ಸುಂದರವಾಗಿತ್ತು. ಬೆಳಕಿಗೆ ಪೂರ್ತಿ ತೆರೆದುಕೊಂಡೆಡೆ ರೂಪುಗೊಂಡ ಮೈಭಾಗಗಳು ಕಡುಗಪ್ಪು ಬಣ್ಣವಾಗಿದ್ದುವು. ಆದರೆ ಕಲ್ಲಿನ ನೆರಳಲ್ಲಿದ್ದಂತಹವು ಬೂದು ಬಣ್ಣವಾಗಿದ್ದುವು. ಶಿಲೆಯೊಳಗೆ ಈ ರೀತಿಯಲ್ಲಿ ಹೂತವುಗಳಲ್ಲಿ ಕೆಲವನ್ನು ಭೂವಿಜ್ಞಾನಿಗಳಿಗೆ ತೋರಿಸಿದ್ದೇನೆ. ಅವರಲ್ಲಿ  ಇವು ಜ್ವಾಲಾಮುಖಿಗಳ ಕ್ರಿಯೆಯಿಂದಲೋ, ಅಥವಾ ಅಗ್ನಿಶಿಲೆಗಳಿಂದಲೋ ಆಗಿರಬೇಕು ಎಂದವರೇ ಹೆಚ್ಚು. ಗಡಸುತನದಲ್ಲಿ ಹಾಗೂ ಅರೆಪಾರದರ್ಶಕತೆಯಲ್ಲಿ ಇದು ಅತ್ಯುತ್ತಮವಾದ ಓಲಿವಾ ಚಿಪ್ಪಿಗೆ (ಬೆರಳಿಲ್ಲದ ಶಂಖದ ಜೀವಿ) ಸಮವಾಗಿತ್ತು. ಆದರೆ ಅದರ ವಾಸನೆ, ಮತ್ತು ಊದುಗೊಳವೆಯ ಬಾಣ ತಗುಲಿದಾಗ ಬಣ್ಣಗಳೆದುಕೊಳ್ಳುವುದರಲ್ಲಿ ಅದು ಜೀವಂತವಾದ ಮುತ್ತಿನ ಚಿಪ್ಪಿಗೆ ನಿಕಟವಾಗಿತ್ತು. ಮುತ್ತಿನ ಚಿಪ್ಪುಗಳ ಕೆಲವು ಭಾಗಗಳ ಮೇಲೆ ಮ್ಯಾಂಟಲ್ ಎನ್ನುವ ಮಾಂಸಲ ಪದರದ ಹೊದಿಕೆ ಇರುತ್ತದೆ ಎನ್ನುವುದು ತಿಳಿದ ವಿಷಯ. ಇಲ್ಲಿ ಶಿಲೆಯೊಳಗೆ ಅಡಕವಾಗಿರುವ ವಸ್ತುವಿನಂತೆಯೇ ಮ್ಯಾಂಟಲ್ಲಿನಿಂದ ಸಾಮಾನ್ಯವಾಗಿ ಮುಚ್ಚಿರುವ ಅಂಗಗಳ ಬಣ್ಣ ಬೆಳಕಿಗೆ ತೆರೆದುಕೊಂಡ ಭಾಗಗಳಿಗಿಂತಲೂ ತುಸು ಪೇಲವವಾಗಿರುತ್ತದೆ.  ಸುಣ್ಣವು ಫಾಸ್ಫೇಟು ಇಲ್ಲವೇ ಕಾರ್ಬೊನೇಟು ರೂಪದಲ್ಲಿ ಚಿಪ್ಪುಗಳು ಹಾಗೂ ಮೂಳೆಗಳಂತಹ ಗಟ್ಟಿಯಾದ ಅಂಗಗಳನ್ನು ಕೂಡುತ್ತದೆ ಎನ್ನುವುದನ್ನು ಗಮನಿಸಿ. ಅಂದ ಮೇಲೆ ಹಲ್ಲಿನ ಎನಾಮಲ್ಲಿಗಿಂತಲೂ ಗಟ್ಟಿಯಾದ, ಹೊಸದಾದ ಚಿಪ್ಪಿನಷ್ಟೇ ನಯವಾದ ಹಾಗೂ ಬಣ್ಣವಿರುವ ಮತ್ತು ಕೆಲವು ಕೆಳಸ್ತರದ ಸಸ್ಯಗಳನ್ನು ಹೋಲುವಂತಹ ರಚನೆ ಶಿಲೆಗಳ ಮೇಲ್ಮೈ ಮೇಲೆ ಮೃತ ಸಾವಯವ ವಸ್ತುಗಳಿಂದ ರಾಸಾಯನಿಕವಾಗಿ ಮರುರೂಪುಗೊಂಡಿರುವುದು ವಿಚಿತ್ರವೆನ್ನಿಸಿದರೂ ಸತ್ಯ.

ಸೈಂಟ್ ಪಾಲ್ ದ್ವೀಪದಲ್ಲಿ ನಾವು ಕಂಡದ್ದು ಎರಡು ಬಗೆಯ ಹಕ್ಕಿಗಳು – ಇವನ್ನು ಬೂಬಿ ಮತ್ತು ನಾಡಿ ಎಂದು ಕರೆದೆವು. ಬೂಬಿ ಎನ್ನುವುದು ಒಂದು ಬಗೆಯ ಕಡಲ ಬಾತು. ನಾಡಿ ಎನ್ನುವುದು ಕಡಲ ಟರ್ನ್ ಹಕ್ಕಿ. ಎರಡೂ ಸೌಮ್ಯ ಸ್ವಭಾವದ ಪೆದ್ದು ಹಕ್ಕಿಗಳು. ಅವು ಮನುಷ್ಯರನ್ನು ಎಷ್ಟರ ಮಟ್ಟಿಗೆ ಗುರುತಿಸುತ್ತವೆ ಎಂದರೆ ನಾನು ನನ್ನ ಕೈಯಲ್ಲಿದ್ದ ಚಾಣದಿಂದ ಎಷ್ಟನ್ನು ಬೇಕಾದರೂ ಕೊಲ್ಲಬಹುದಿತ್ತು. ಬೂಬಿ ಬರಿಗಲ್ಲಿನ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಟರ್ನ್ ಹಕ್ಕಿಯು ಸಾಗರ ಸಸ್ಯಗಳನ್ನು ಬಳಸಿಕೊಂಡು ಸರಳವಾದ ಗೂಡನ್ನು ಕಟ್ಟುತ್ತದೆ. ಇಂತಹ ಹಲವು ಗೂಡುಗಳ ಪಕ್ಕದಲ್ಲೇ ಒಂದು ಹಾರುವ ಮೀನು ಇರುತ್ತಿತ್ತು. ಬಹುಶಃ ಗಂಡು ಹಕ್ಕಿ ತನ್ನ ಸಂಗಾತಿಗೆಂದು ಅದನ್ನು ಅಲ್ಲಿ ತಂದಿಟ್ಟಿರಬೇಕು. ಅಲ್ಲಿರುವ ಪೊಟರೆಗಳೊಳಗೆ  ವಾಸಿಸುವ ದೊಡ್ಡದೊಂದು ಚುರುಕು ಏಡಿ ಆ ತಂದೆ-ತಾಯಿ ಹಕ್ಕಿಗಳ ಗಮನ ಸ್ವಲ್ಪ ಅತ್ತಿತ್ತ ಹರಿದ ಕೂಡಲೇ ಮೀನನ್ನು ಕದಿಯುತ್ತಿದ್ದುದು ತಮಾಷೆಯಾಗಿತ್ತು. ಇಲ್ಲಿಗೆ ಬಂದಿದ್ದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರಾದ ಸರ್. ಡಬ್ಲ್ಯೂ ಸೈಮಂಡ್ಸ್ ಈ ಏಡಿಗಳು ಮರಿ ಹಕ್ಕಿಗಳನ್ನೂ ಗೂಡಿನಿಂದಾಚೆಗೆ ಎಳೆದುಕೊಂಡು ಹೋಗಿ ತಿನ್ನುವುದನ್ನು ನೋಡಿದ್ದಾಗಿ ಹೇಳಿದರು.

ಈ ದ್ವೀಪದ ಮೇಲೆ ಒಂದು ಗಿಡವೂ ಇಲ್ಲ. ಕಲ್ಲಿನ ಮೇಲೆ ಬೆಳೆಯುವ ಪಾಚಿಯೂ ಕಾಣೆ. ಆದರೂ ಇಲ್ಲಿ ಹಲವು ಕೀಟಗಳನ್ನೂ, ಜೇಡಗಳನ್ನೂ ಕಾಣಬಹುದು. ಇಲ್ಲಿನ ನೆಲವಾಸಿಗಳ ಪರಿಪೂರ್ಣ ಪಟ್ಟಿ ಹೀಗಿದೆ. ಬೂಬಿಯ ಮೇಲೆ ಇರುವ ಓಲ್ಫರ್ಸಿಯಾ ಎನ್ನುವ ನೊಣ, ಹಾಗೂ ಹಕ್ಕಿಗಳ ಜೊತೆಗೇ ಪರಾವಲಂಬಿಯಾಗಿರುವ ಒಂದು ಚಿಗಟ; ಗರಿಗಳನ್ನು ತಿಂದು ಬದುಕುವ ಕಂದು ಬಣ್ಣದ ಒಂದು ಪತಂಗ, ಸಗಣಿಯ ಅಡಿಯಲ್ಲಿ ಬದುಕುವ ಕ್ವೀಡಿಯಸ್ ಎನ್ನುವ ದುಂಬಿ ಮತ್ತು ಒಂದು ಹೇನು ಹಾಗೂ ಬಹಳಷ್ಟು ಜೇಡಗಳು. ಇವು ನೀರಹಕ್ಕಿಯನ್ನು ಶುಚಿಗೊಳಿಸುವ ಸಣ್ಣ ಪುಟ್ಟ ಕೀಟಗಳನ್ನು ತಿಂದು ಬದುಕುತ್ತಿರಬೇಕು ಎನ್ನುವುದು ನನ್ನ ಊಹೆ. ಉಷ್ಣವಲಯದಲ್ಲಿನ ಹವಳದ ದ್ವೀಪಗಳು ರೂಪುಗೊಂಡ ತಕ್ಷಣವೇ ಅವುಗಳಲ್ಲಿ ತೆಂಗಿನಂತಹ ಎತ್ತರದ ಗಿಡಗಳು ಹಾಗೂ ಇತರೆ ಸಸ್ಯಗಳು, ಹಕ್ಕಿಗಳು ಹಾಗೂ ಮನುಷ್ಯರು ನೆಲಸುವುವು ಎಂದು ನಾವು ಆಗಾಗ್ಗೆ ಕೇಳುವ ಕಥೆಗಳೆಲ್ಲವೂ ಬಹುಶಃ ಸರಿಯಲ್ಲ. ಹೊಸದಾಗಿ ರೂಪುಗೊಂಡ ದ್ವೀಪಗಳಲ್ಲಿ ಮೊದಲು ನೆಲೆಯಾಗುವಂಥವು ಗರಿ ಮತ್ತು ಇತರೆ ಕಸವನ್ನು ತಿನ್ನುವ, ಪರಾವಲಂಬಿಯಾದ ಕೀಟಗಳು ಹಾಗೂ ಜೇಡ ಎನ್ನುವುದು ಈ ಕಥೆಯಲ್ಲಿನ ರಮ್ಯತೆಯನ್ನು ಹಾಳುಗೆಡವಿಬಿಡುತ್ತವೆ.

 

ಉಷ್ಣವಲಯದ ಸಾಗರಗಳಲ್ಲಿರುವ ಅತಿ ಸಣ್ಣ ಕಲ್ಲೂ ಕೂಡ ಅಸಂಖ್ಯ ಸಮುದ್ರ ಸಸ್ಯಗಳಿಗೆ, ಪ್ರಾಣಿಗಳಿಗೆ ಆಸರೆಯಾಗಿ ತನ್ಮೂಲಕ ಬೃಹತ್ಪ್ರಮಾಣದ ಮೀನುಗಳಿಗೂ ಆಧಾರವಾಗುತ್ತದೆ. ಗಾಳಕ್ಕೆ ಸಿಕ್ಕುವ ಮೀನುಗಳ ಹೆಚ್ಚಿನ ಪಾಲು ಯಾರಿಗೆ ಸಿಗಬೇಕು ಎನ್ನುವ ಕಾಳಗವು ಬೆಸ್ತರು ಹಾಗೂ ಶಾರ್ಕ್ ಮೀನುಗಳ ನಡುವೆ ನಿರಂತರವಾಗಿ ನಡೆಯುತ್ತಿರುತ್ತದೆ. ಬರ್ಮುಡಾದ ಬಳಿ ನೀರಿನಡಿಯಲ್ಲಿ ಒಂದು ನಡುಗಡ್ಡೆ ಇರುವುದು ಅದರ ಸುತ್ತಲೂ ಸುತ್ತುತ್ತಿದ್ದ ಮೀನಿನ ಪ್ರಮಾಣದಿಂದಲೇ ಪತ್ತೆ ಮಾಡಲಾಯಿತು ಎಂದೂ ನಾನು ಕೇಳಿದ್ದೇನೆ.

ಫರ್ನಾಂಡೊ ನೊರೊನ್ಹಾ. ಫೆಬ್ರವರಿ 20 :_ ನಾನು ಅಲ್ಲಿದ್ದ ಕೆಲವು ಗಂಟೆಗಳ ಅವಧಿಯಲ್ಲಿ ನನಗೆ  ಸಿಕ್ಕ ಅವಕಾಶದಲ್ಲಿ ಈ ದ್ವೀಪದ ರಚನೆಯು ಜ್ವಾಲಾಮುಖಿಗಳಿಂದಾಗಿದ್ದು, ಆದರೆ ಇತ್ತೀಚೆಗಲ್ಲ ಎನ್ನುವುದನ್ನು ಕಂಡುಕೊಳ್ಳಬಹುದಾಯಿತು. ಇದರ ಪ್ರಮುಖ ಲಕ್ಷಣವೆಂದರೆ ಒಂದು ಶಂಖುವಿನಾಕಾರದ ಸುಮಾರು 1000 ಅಡಿ ಎತ್ತರದ ಗುಡ್ಡ. ಇದರ ಮೇಲುಭಾಗವು ಬಲು ಕಡಿದಾಗಿತ್ತಲ್ಲದೆ ಒಂದು ಬದಿಯಲ್ಲಿ ತಳದ ಮೇಲೆ ಚಾಚಿಕೊಂಡಂತಿತ್ತು. ಅಲ್ಲಿದ್ದ ಶಿಲೆ ಫೋನೋಲೈಟ್. ಅಸಮವಾದ ಕಂಭಗಳಾಗಿ ವಿಂಗಡಣೆಯಾಗಿತ್ತು. ಪ್ರತ್ಯೇಕವಾಗಿ ಅಂತಹುದೊಂದನ್ನು ನೋಡಿದಾಗ ಅರೆದ್ರವಾಸ್ಥಿತಿಯಲ್ಲಿ ಅದು ಮೇಲೆ ನುಗ್ಗಿ ಬಂದಿದ್ದಾಗಿ ಅನಿಸುವುದು.

ಆದರೆ ಸೈಂಟೆ ಹೆಲೆನಾದಲ್ಲಿರುವ ಇದೇ ಬಗೆಯ ರಚನೆ ಹಾಗೂ ಆಕಾರದ ಶಿಖರಗಳು,  ಕುಸಿಯುತ್ತಿದ್ದ ಕೆಸರಿನ ಪದರಗಳೇ ಅಚ್ಚುಗಳಾಗಿ, ಅದರಲ್ಲಿ ಸುರಿದ ಕರಗಿದ ಕಲ್ಲೇ ಹೀಗೆ ದೈತ್ಯ ಕೋಡುಗಲ್ಲುಗಳಾಗಿವೆಯೆಂದು ಖಚಿತ ಪಡಿಸಿಕೊಂಡಿದ್ದೆ. ಇಡೀ ದ್ವೀಪವೆ ಕಾಡಾಗಿತ್ತು. ಆದರೆ ಅಲ್ಲಿನ ಶುಷ್ಕ ವಾತಾವರಣದಿಂದಾಗಿ ಹಸಿರಿನ ಹಬ್ಬವೇನೂ ಇರಲಿಲ್ಲ. ಪರ್ವತವನ್ನು ಹತ್ತುವಾಗ ಅರ್ಧ ಹಾದಿಯಲ್ಲಿ ಲಾರೆಲ್ ಗಿಡಂದತಹ ಮರಗಳ ನೆರಳಿನಲ್ಲಿದ್ದ ದೈತ್ಯ ಶಿಲಾಕಂಭಗಳು ಕೆಲವು  ಕಾಣಿಸಿದುವು. ಇನ್ನು ಕೆಲವು ಶಿಲೆಗಳು ರೋಜಾ ಬಣ್ಣದ ಹೂವುಗಳಷ್ಟೆ ಇದ್ದು, ಎಲೆಗಳೇ ಇಲ್ಲದ ಗಿಡಗಳನ್ನು ಹೊದ್ದ ಕಾರಣವಾಗಿ ತುಸು ಉಲ್ಲಾಸದಾಯಕವಾಗಿದ್ದುವು.

ಬಹಿಯಾ (ಸ್ಯಾನ್ ಸಾಲ್ವಡೋರ್). ಬ್ರೆಜಿಲ್. ಫೆಬ್ರವರಿ 29: ಈ ದಿನ ಖುಷಿಯಿಂದ ಕಳೆಯಿತು.ಬ್ರೆಜಿಲ್ಲಿನ ಕಾಡಿನೊಳಗೆ ಮೊತ್ತಮೊದಲು ಕಾಲಿಟ್ಟ ಪ್ರಕೃತಿ ವಿಜ್ಞಾನಿಯ ಭಾವನೆಗಳನ್ನು ವ್ಯಕ್ತಪಡಿಸಲು ಖುಷಿ ಎನ್ನುವ ಪದ ಸಾಲದು. ಅಲ್ಲಿನ ಹುಲ್ಲುಗಾವಲಿನ ಗಾಂಭೀರ್ಯ, ಪರೋಪಜೀವಿ ಸಸ್ಯಗಳ ಹೊಸತನ, ಹೂವುಗಳ ಸೌಂದರ್ಯ ಎಲೆಗಳ ಹೊಳೆಯುವ ಹಸಿರು ಹಾಗೂ ಎಲ್ಲದಕ್ಕಿಂತಲೂ ಮುಖ್ಯವಾಗಿ ಅಲ್ಲಿನ ಸಮೃದ್ಧ ಸಸ್ಯರಾಶಿ ನನ್ನನ್ನು ಬೆರಗುಗೊಳಿಸಿದುವು. ಕಾಡಿನೊಳಗಂತೂ ಶಬ್ದ-ನಿಶ್ಶಬ್ದಗಳ ವೈರುಧ್ಯ ವ್ಯಾಪಿಸಿತ್ತು. ಅಲ್ಲಿನ ಕೀಟಗಳ ಸದ್ದು ಎಷ್ಟು ಜೋರಾಗಿತ್ತೆಂದರೆ ಅದು ತೀರದಿಂದ ಹಲವು ನೂರು ಗಜ ದೂರದಲ್ಲಿ ಲಂಗರು ಹಾಕಿದ್ದ ಹಡಗಿಗೂ ಕೇಳಿಸುವಂತಿತ್ತು. ಹಾಗಿದ್ದೂ ಕಾಡಿನ ಅಂತರಾಳವನ್ನು ಎಲ್ಲೆಡೆ ಒಂದು ಬಗೆಯ ನಿಶ್ಶಬ್ದ ಆಳುತ್ತಿತ್ತು. ನಿಸರ್ಗದ ಪ್ರೇಮಿಗಳಿಗೆ ಇಂತಹ ದಿನವೊಂದು ಜೀವನದಲ್ಲಿ ಅವರು ಮತ್ತೆಂದೂ ಅನುಭವಿಸಲಾರದಂತಹ ಸಂತಸವನ್ನು ತರುತ್ತದೆ. ಹಲವು ಗಂಟೆಗಳವರೆಗೆ ಅಲ್ಲಿ ಅಲೆದಾಡಿದ ಮೇಲೆ ನಾನು ಲಂಗರು ಹಾಕಿದ್ದೆಡೆಗೆ ಹಿಂದಿರುಗಿದೆ. ಆದರೆ ಅಲ್ಲಿ ತಲುಪುವುದಕ್ಕೂ ಸ್ವಲ್ಪ ಮುನ್ನ ಉಷ್ಣವಲಯದ ಚಂಡಮಾರುತವೊಂದರಲ್ಲಿ ಸಿಲುಕಿದ್ದೆ. ಅಲ್ಲಿದ್ದ ದಪ್ಪನೆಯ ಮರವೊಂದರಡಿಯಲ್ಲಿ ಆಶ್ರಯ ಹುಡುಕಿದೆ. ಆ ಮರದ ಎಲೆಗಳು ಎಷ್ಟು ದಟ್ಟವಾಗಿತ್ತೆಂದರೆ  ಇಂಗ್ಲೆಂಡಿನ ಮಳೆ ಅದನ್ನು ದಾಟಿ ಬರುವುದು ಸಾಧ್ಯವೇ ಇರಲಿಲ್ಲ.  ಆದರಿಲ್ಲಿಯೋ ಒಂದೆರಡೇ ನಿಮಿಷಗಳಲ್ಲಿ ಸಣ್ಣ ತೊರೆಯೊಂದು ಮರದಿಂದ ಕೆಳಗೆ ಇಳಿಯತೊಡಗಿತು. ಅತಿ ಗಾಢವಾದ ಅರಣ್ಯದ ಬುಡದಲ್ಲಿದ್ದ ದಟ್ಟ ಹಸಿರಿಗೆ ಮಳೆಯ ಈ ಉಗ್ರತೆಯೇ ಕಾರಣವೆನ್ನಬೇಕು. ಮಳೆಯೇನಾದರೂ ಶೀತ ಪ್ರದೇಶಗಳಲ್ಲಿಯಂತಿದ್ದಿದ್ದರೆ ಬಹುಶಃ ಅದು ಮಳೆಯ ಬಹುಪಾಲು ನೆಲ ತಲುಪುವ ಮುನ್ನವೇ ಒಂದೋ ಆವಿಯಾಗಿ ಬಿಡುತ್ತಿತ್ತು, ಇಲ್ಲವೇ ಇಂಗಿ ಹೋಗುತ್ತಿತ್ತು. ಈ ರಾಜಸಾಗರದ ಢಾಳಾದ ಸೌಂದರ್ಯವನ್ನು ನಾನು ಈಗ ಬಣ್ಣಿಸುವುದಿಲ್ಲ. ಏಕೆಂದರೆ ನಾವು ಹಿಂತಿರುಗುವಾಗ ಇಲ್ಲಿಗೆ ಇನ್ನೊಮ್ಮೆ ಭೇಟಿ ನೀಡಿದ್ದೆವು. ಆ ಸಂದರ್ಭದಲ್ಲಿ ನಾನು ಇದರ ಬಗ್ಗೆ ಹೇಳುವೆ.

ಬ್ರೆಜಿಲ್ಲಿನ ಕರಾವಳಿಯಲ್ಲಿ, ಕನಿಷ್ಟ 2000 ಮೈಲುಗಳುದ್ದಕ್ಕೂ ಹಾಗೂ ಖಂಡಿತವಾಗಿ ಒಳನಾಡಿನಲ್ಲಿ ಸಾಕಷ್ಟು ಜಾಗೆಯಲ್ಲಿ ಎಲ್ಲೆಲ್ಲೆಲ್ಲ ಗಟ್ಟಿಯಾದ ಶಿಲೆಗಳಿವೆಯೋ ಅವೆಲ್ಲವೂ ಗ್ರಾನೈಟು ಸ್ವರೂಪದವು. ಅತೀವ ಒತ್ತಡದಲ್ಲಿಯಷ್ಟೆ ಹರಳುಗಟ್ಟುತ್ತವೆಂದು ಭೂವಿಜ್ಞಾನಿಗಳು ಭಾವಿಸುವ ಈ ವಸ್ತುಗಳು ಇಷ್ಟೊಂದು ಬೃಹತ್ ಪ್ರದೇಶವನ್ನು ಆವರಿಸಿದೆಯೆನ್ನುವುದು ಹಲವು ಕುತೂಹಲದ ಪ್ರಶ್ನೆಗಳಿಗೆ ಎಡೆಗೊಡುತ್ತದೆ. ಇದು ಆಳವಾದ ಸಾಗರದ ಅಡಿಯಲ್ಲಿ ರೂಪುಗೊಂಡಿದ್ದೋ? ಅಥವಾ ಇದರ ಮೇಲೆ ಯಾವುದಾದರೂ ಪದರದ ಹೊದಿಕೆ ಇದ್ದದ್ದು ಈಗ ಕಾಣೆಯಾಗಿದೆಯೋ? ಅನಂತ ಕಾಲಾವಧಿಯಲ್ಲಿಯೂ ಇಷ್ಟು ಮೇಲಿನ ಹೊದಿಕೆಯನ್ನು ತೆಗೆದು ಸಹಸ್ರ ಲೀಗುಗಳಷ್ಟು ವಿಸ್ತಾರವಾದ ಶಿಲೆಯನ್ನು ಬಟಾಬಯಲಾಗಿಸುವಂತಹ ಶಕ್ತಿಯೊದು ಇದೆಯೆಂದು ನಾವು ನಂಬೋಣವೇ?

ನಗರದಿಂದ ಬಹಳ ದೂರವೇನೂ ಇಲ್ಲದ, ಪುಟ್ಟ ನದಿಯೊಂದು ಸಮುದ್ರವನ್ನು ಸೇರುವ ಜಾಗದಲ್ಲಿ ಹಂಬೋಲ್ಡ್ ಚರ್ಚಿಸಿದ್ದ ವಿಷಯವನ್ನು ಕುರಿತ ವಿದ್ಯಮಾನವನ್ನು ನಾನು ಕಂಡೆ.  ಮಹಾನದಿಗಳಾದ ಓರಿನಿಕೊ, ನೈಲ್ ಮತ್ತು ಕಾಂಗೋ ನದಿಗಳು ಸಮುದ್ರವನ್ನು ಸೇರುವೆಡೆಯಲ್ಲಿರುವ ಸಯೆನಿಟಿಕ್ ಶಿಲೆಗಳ ಮೇಲೆ ಯಾರೋ ಪ್ಲಂಬಾಗೋವನ್ನು ಲೇಪಿಸಿದಂತೆ ಕರಿಯ ಬಣ್ಣದ ಲೇಪವೊಂದು ಇದೆ. ಇದು ಬಹಳ ತೆಳುವಾದ ಲೇಪ. ಬರ್ಜಿಲಿಯಸ್ ವಿಶ್ಲೇಷಿಸಿದಾಗ ಇದರಲ್ಲಿ ಮ್ಯಾಂಗನೀಸು ಮತ್ತು ಕಬ್ಬಿಣದ ಆಕ್ಸೈಡುಗಳಿರುವುದೆಂದು ತಿಳಿದು ಬಂದಿತ್ತು. ಓರಿನೋಕೋದಲ್ಲಿ ಅದು ಆಗಾಗ್ಗೆ ಪ್ರವಾಹದಿಂದ ಮುಳುಗುವ ಶಿಲೆಗಳ ಮೇಲೆ ಮಾತ್ರ,   “ ನೀರ ಹರಿವು ಬೆಳ್ಳಗಿರುವೆಡೆ ಕಲ್ಲು ಕಪ್ಪಗಿರುತ್ತದೆ” ಎಂಬ ಇಂಡಿಯನ್ನರ ಗಾದೆಯಂತೆ  ನದಿಯ ಹರಿವು ಬಹಳ ವೇಗವಾಗಿರುವಂತಲ್ಲಿ ಮಾತ್ರ  ಇದು ಕಂಡು ಬಂದಿತ್ತು. ಇಲ್ಲಿನ ಲೇಪನ ಕಪ್ಪಗಿಲ್ಲದೆ ಗಾಢ ಕಂದು ಬಣ್ಣವಾಗಿದ್ದು ಕೇವಲ ಕಬ್ಬಿಣದಂಶವಷ್ಟೆ ಇದ್ದಂತಿತ್ತು.

ಇಲ್ಲಿಂದ ಹೆಕ್ಕಿ ತಂದ ಮಾದರಿಗಳು ಆ ಕಂದು ಬಣ್ಣದ ಕಲ್ಲುಗಳು ಬಿಸಿಲಿನಲ್ಲಿ ಹೇಗೆ ಹೊಳೆಯುತ್ತವೆಂಬುದನ್ನು ತಿಳಿಸಲಶಕ್ತವಾಗಿವೆ. ಈ ಕಲ್ಲುಗಳು ಉಬ್ಬರದಲೆಗಳ ಪರಿಧಿಯೊಳಗಷ್ಟೆ ಇರುತ್ತವೆ. ದೊಡ್ಡ ನದಿಗಳಲ್ಲಿ  ಸಮುದ್ರದ ಸಮೀಪದಲ್ಲಿ ಹರಿವು ನಿಧಾನವಾಗತೊಡಗಿದ ಹಾಗೆ, ಸಮುದ್ರದ ನೊರೆಯೇ ಇದನ್ನು ನಯಗೊಳಿಸುವ ಶಕ್ತಿಯನ್ನು ನೀಡುತ್ತದೆ. ಇದೇ ಬಗೆಯಲ್ಲಿಯೇ ಉಬ್ಬರವಿಳಿತಗಳು ಕೂಡ ನಿಯತ ಕಾಲದಲ್ಲಿ ಇವು ಮುಳುಗೇಳುವಂತೆ ಮಾಡುತ್ತಿದ್ದಿರಬೇಕು. ಹೀಗೆ ಮೇಲ್ನೋಟಕ್ಕೆ ವಿಭಿನ್ನವೆನ್ನಿಸುವ ಸಂದರ್ಭಗಳು ಒಂದೇ ಬಗೆಯ ಪರಿಣಾಮಗಳನ್ನುಂಟು ಮಾಡುವಂತೆ ತೋರಿದರೂ, ವಾಸ್ತವವಾಗಿ ಸಂದರ್ಭಗಳೆಲ್ಲವೂ ಒಂದೇ ರೀತಿಯವು. ಈ ಶಿಲೆಗಳ ಮೇಲಿರುವ ಲೋಹದ ಆಕ್ಸೈಡುಗಳ ಮೂಲ ಏನೆಂದು ತಿಳಿದಿಲ್ಲ. ಅವುಗಳೆಲ್ಲದರ ದಪ್ಪವೂ ಸಮಾನವಾಗಿರುವುದಕ್ಕೂ ಕಾರಣವೇನೆಂದು ಹೇಳಲಾಗಿಲ್ಲ.

ಒಂದು ದಿನ ತೀರದಲ್ಲಿ ಈಜುತ್ತಿದ್ದಾಗ ಹಿಡಿದ ಡಯೋಡಾನ್ ಆಂಟೆನ್ನೇಟಸ್ ಮೀನಿನ ಚಲನವಲನಗಳನ್ನು ನೋಡಿದೆ. ಮೋಜೆನಿಸಿತು. ದೊಗಳೆ ದೊಗಳೆಯಾದ ಚರ್ಮದ  ಈ ಮೀನಿಗೆ ಹೆಚ್ಚೂ ಕಡಿಮೆ ದುಂಡಗಿನ ಚೆಂಡಿನಂತೆ ಉಬ್ಬುವ ವಿಶಿಷ್ಟ ಶಕ್ತಿ ಇದೆ. ನೀರಿನಿಂದ ಹೊರಗೆ ಸ್ವಲ್ಪ ಸಮಯ ಇಟ್ಟು ಮರಳಿ ನೀರಿಗೆ ಬಿಟ್ಟ ಕೂಡಲೇ ಸಾಕಷ್ಟು ಗಾಳಿ ಮತ್ತು ನೀರನ್ನು ಬಾಯಿಯಿಂದ ಸೆಳೆದುಕೊಳ್ಳುತ್ತದೆ. ಬಹುಶಃ ಗಂಟಲಿನಲ್ಲಿರುವ ಕಿವಿರುಗಳಿಂದಲೂ ಸೆಳೆದುಕೊಳ್ಳಬಹುದು. ಇಲ್ಲಿ ಎರಡು ವಿದ್ಯಮಾನಗಳಿವೆ. ಮೊದಲು ಗಾಳಿಯನ್ನು ನುಂಗುತ್ತದೆ. ಅನಂತರ ಅದನ್ನು ದೇಹದೊಳಗಿನ ಕುಹರದೊಳಗೆ ದೂಡುತ್ತದೆ. ಗಾಳಿಯು ಹೊರಗೆ ಬಾರದಂತೆ ಸ್ನಾಯು ಕವಾಟಗಳು ಸಂಕುಚಿಸುವುದು ಹೊರಗಿನಿಂದಲೇ ಕಾಣುತ್ತದೆ.  ಆದರೆ ನೀರು ಹೀಗಲ್ಲ. ಅಲ್ಲಾಡದೆ ತೆರೆದಿಟ್ಟ ಬಾಯಿಯೊಳಗಿನಿಂದ ನಿಧಾನವಾಗಿ ಒಳಹೋಗುತ್ತದೆ. ಈ ಎರಡನೆಯ ವಿದ್ಯಮಾನ ಹೀರಿದಲ್ಲದೆ ಆಗದು. ಹೊಟ್ಟೆಯ ಬಳಿ ಇರುವ ಚರ್ಮ ಬೆನ್ನಿನ ಮೇಲಿರುವುದಕ್ಕಿಂತಲೂ ದೊಗಲೆಯಾಗಿ ಸಡಿಲವಾಗಿದೆ. ಆದ್ದರಿಂದ ಉಬ್ಬಿದಾಗ  ಬೆನ್ನಿನ ಭಾಗಕ್ಕಿಂತಲೂ ಹೊಟ್ಟೆಯ ಭಾಗವು ಹೆಚ್ಚು ಹಿಗ್ಗುತ್ತದೆ. ಪರಿಣಾಮವಾಗಿ ಮೀನು ಬೆನ್ನು ಕೆಳಗಾಗಿ ತೇಲಲಾರಂಭಿಸುತ್ತದೆ.  ಈ ಸ್ಥಿತಿಯಲ್ಲಿ ಡಯೋಡಾನು ಈಜಬಲ್ಲುದೋ ಎನ್ನುವ ಬಗ್ಗೆ ಕುವಿಯರ್ ಸಂದೇಹ ವ್ಯಕ್ತಪಡಿಸಿದ್ದ. ಆದರೆ ಇದು ಈ ಸ್ಥಿತಿಯಲ್ಲಿಯೇ ನೇರವಾಗಿ ಸರಳ ರೇಖೆಯಲ್ಲಿ ಚಲಿಸುವುದಷ್ಟೆ ಅಲ್ಲ, ಬೇರೊಂದು ಕಡೆಗೆ ಹೊರಳಲೂ ಬಲ್ಲುದು.  ಈ ಪಾರ್ಶ್ವ ಚಲನೆಯನ್ನು ಅದು ಪಕ್ಕೆಯಲ್ಲಿರುವ ಈಜುರೆಕ್ಕೆಗಳಿಂದ ಸಾಧಿಸುತ್ತದೆ. ಬಾಲ ಮುದುರಿಕೊಂಡಿರುವುದರಿಂದ ಅದು ಪ್ರಯೋಜನಕ್ಕೆ ಬಾರದು. ಇಷ್ಟೊಂದು ಗಾಳಿ ತುಂಬಿಕೊಂಡು ದೇಹವು ತೇಲುವುದರಿಂದ ಅದರ ಕಿವಿರುಗಳು ನೀರಿನಿಂದ ಹೊರಗೆ ಇರುತ್ತವೆ. ಆದರೆ ಬಾಯಿಯಿಂದ ಸೆಳೆದುಕೊಂಡ ನೀರಿನ ಝರಿಯೊಂದು ಅದರ ಮೂಲಕ ಸದಾ ಹರಿಯುತ್ತಿರುತ್ತದೆ.

ಹೀಗೆ ಊದಿಕೊಂಡ ಸ್ಥಿತಿಯಲ್ಲಿ ಸ್ವಲ್ಪ ಸಮಯ ಕಳೆದ ಮೇಲೆ ಮೀನು ಗಂಟಲಿನ ಕಿವಿರು ಮತ್ತು ಬಾಯಿಯಿಂದ ಗಾಳಿ ಮತ್ತು ನೀರನ್ನು ಸಾಕಷ್ಟು ಒತ್ತಡದಿಂದ ಹೊರದೂಡುತ್ತದೆ. ಇಚ್ಛಾನುಸಾರ ಅದು ನೀರಿನ ಕೆಲವು ಅಂಶವನ್ನಷ್ಟೆ ಹೊರದೂಡಬಲ್ಲುದು. ಆದ್ದರಿಂದ ತನ್ನ ಸಾಪೇಕ್ಷ ಸಾಂದ್ರತೆಯನ್ನು ನಿಯಂತ್ರಿಸುವುದಕ್ಕೇ ನೀರನ್ನು ಇದು ಹೀಗೆ ಸೆಳೆದುಕೊಳ್ಳುತ್ತಿರಬಹುದು. ಈ ಡಯೋಡಾನಿನಲ್ಲಿ ಹಲವು ರಕ್ಷಣಾ ಉಪಾಯಗಳಿವೆ. ಅದು ಬಲವಾಗಿ ಕಚ್ಚಬಲ್ಲದು. ಇಲ್ಲವೇ ತನ್ನ ದವಡೆಗಳಿಂದ ವಿಚಿತ್ರವಾದೊಂದು ಶಬ್ದ ಮಾಡುತ್ತ ನೀರನ್ನು  ಸ್ವಲ್ಪ ದೂರದವರೆಗೆ ರಭಸದಿಂದ ಉಗಿಯಬಲ್ಲುದು.

ಅದು ಊದಿಕೊಂಡದ್ದರಿಂದ ಚರ್ಮದ ಮೇಲಿರುವ ತೊಟ್ಟಿನಾಕಾರದ ಪ್ಯಾಪಿಲಾಗಳು ನೆಟ್ಟಗಾಗಿ, ಚೂಪಾಗುತ್ತವೆ. ಇದಕ್ಕಿಂತಲೂ ವಿಚಿತ್ರವೆಂದರೆ ಯಾರಾದರೂ ಮುಟ್ಟಿದಾಗ ಅದು ತನ್ನ ಹೊಟ್ಟೆಯ ಬದಿಯ ಚರ್ಮದಿಂದ ಅತಿ ಸುಂದರವಾದ ಅಚ್ಚಕೆಂಪು ಬಣ್ಣದ ದಾರದಂಥ ವಸ್ತುವನ್ನು ಸ್ರವಿಸುತ್ತದೆ. ಈ ವಸ್ತುವು ಕಾಗದ ಹಾಗೂ ದಂತದ ಮೇಲೆ ಅಚ್ಚಳಿಯದಂತೆ ಬಣ್ಣವನ್ನುಳಿಸುತ್ತದೆ. ಈ ಬಣ್ಣ ಇಂದಿಗೂ ಅಳಿದಿಲ್ಲ. ಈ ಸ್ರಾವದ ಸ್ವರೂಪ ಹಾಗೂ ಬಳಕೆಯ ಬಗ್ಗೆ ನನಗೆ ತಿಳಿದಿಲ್ಲ. ಫಾರೆಸಿನ ಡಾ. ಅಲಾನರು ಶಾರ್ಕಿನ ಹೊಟ್ಟೆಯಲ್ಲಿಯೂ ಜೀವಂತವಾಗಿದ್ದ, ಊದಿದ ಡಯೋಡಾನನ್ನು ಕಂಡಿದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಅದು ಶಾರ್ಕಿನ ಹೊಟ್ಟೆಯನ್ನು ಕವರಿಕೊಂಡು, ಬದಿಯಿಂದ ಹೊರಬಂದಿದ್ದನ್ನು ಕಂಡಿದ್ದಾರಂತೆ. ಹೀಗೆ ಶಾರ್ಕ್ ಸತ್ತಿದ್ದನ್ನು ಕಂಡಿದ್ದಾರಂತೆ. ಅಲ್ಲ. ದೈತ್ಯವಾದ ಉಗ್ರ ಶಾರ್ಕ್ ಮೀನನ್ನು ಹೀಗೊಂದು ಪುಟ್ಟ ಮೃದುವಾದ ಮೀನು ಕೊಲ್ಲಬಹುದೆಂದು ಯಾರಿಗಾದರೂ ಗೊತ್ತಿತ್ತೇ?

ಮಾರ್ಚ್ 18 – ಬಹಿಯಾದಿಂದ ಹೊರಟೆವು. ಕೆಲವು ದಿನಗಳ ನಂತರ  ಅಬ್ರೊಲ್ಹೋಸ್ ಕಿರುದ್ವೀಪಗಳು ಇನ್ನೇನು ಸನಿಹದಲ್ಲಿವೆ ಎನ್ನುವಾಗ ಸಮುದ್ರದಲ್ಲಿದ್ದ ಕೆಂಪು-ಕಂದು ಬಣ್ಣ ನನ್ನ ಗಮನ ಸೆಳೆಯಿತು. ಭೂತಗನ್ನಡಿಯ ಅಡಿಯಲ್ಲಿ ನೋಡಿದಾಗ ನೀರಿನ ಮೇಲೆ ಎಲ್ಲೆಡೆಯೂ ಕೆಂಪನೆಯ ಹುಲ್ಲಿನ ತುಂಡುಗಳು ಇದ್ದಂತೆನಿಸಿತು. ಈ ತುಣುಕುಗಳ ತುದಿ ಕಚ್ಚು ಕಚ್ಚಾಗಿತ್ತು.  ಇವು ಉರುಳೆಯಾಕಾರದ ಸೂಕ್ಷ್ಮ ಪಾಚಿಯ ಬಗೆ. ಇಪ್ಪತ್ತರಿಂದ ಅರವತ್ತು ಉರುಳೆಗಳ ತೆಪ್ಪವಾಗಿ ತೇಲುತ್ತಿದ್ದುವು. ಕೆಂಪು ಸಮುದ್ರದ ಮೇಲೆ ವಿಶಾಲವಾಗಿ ಹರಡಿಕೊಂಡು ಸಮುದ್ರಕ್ಕೆ ಆ ಹೆಸರು ಬರಲು ಕಾರಣವಾದ ಟ್ರೈಕೊಡೆಸ್ಮಿಯಂ ಎರಿತ್ರೀಯಮ್ ಎನ್ನುವ ಪಾಚಿಯ ಪ್ರಭೇದವೇ ಇದು ಎಂದು ಮಿ. ಬರ್ಕಲಿ ತಿಳಿಸಿದ್ದಾರೆ. ಅವುಗಳ ಸಂಖ್ಯೆ ಅನಂತವಿರಬೇಕು. ಏಕೆಂದರೆ ಇಂತಹ ಹಲವು ಪಟ್ಟೆಗಳ ಮೂಲಕ ನಮ್ಮ ಹಡಗು ತೇಲಿ ಸಾಗಿತು. ಇವುಗಳಲ್ಲಿ ಒಂದು ಸುಮಾರು ಹತ್ತು ಗಜ ಅಗಲವಿತ್ತು. ನೀರಿನ ಬಣ್ಣವನ್ನು ಗಮನಿಸಿದಾಗ ಕನಿಷ್ಟ ಎರಡೂವರೆ ಮೈಲಿಗಳಷ್ಟು ಉದ್ದವಿದೆಯೆನ್ನಿಸಿತು. ಪ್ರತಿಯೊಂದು ದೀರ್ಘವಾದ ಸಾಗರಯಾನದಲ್ಲಿ  ಎಲ್ಲೋ ಒಂದು ಕಡೆ ಇಂತಹ ಪಾಚಿಗಳ ಉಲ್ಲೇಖವಿದ್ದೇ ಇರುತ್ತ಻ದೆ. ಇವು ಆಸ್ಟ್ರೇಲಿಯಾ ಸಮೀಪದ ಸಾಗರಗಳಲ್ಲಿ ಕಾಣಿಸುವುದು ಬಲು ಸಾಮಾನ್ಯ. ಕೇಪ್ ಲೂವಿನ್ ಬಳಿ ನಾನು ಇದರ ನೆಂಟನಾದ ಆದರೆ ತುಸು ಪುಟ್ಟದಾದೊಂದು ಬೇರೊಂದು ಪ್ರಭೇದವನ್ನು ಪತ್ತೆ ಮಾಡಿದೆ. ತನ್ನ ಮೂರನೇ ಸಾಗರಯಾನದ ವೇಳೆ ಕಂಡ ಇವುಗಳನ್ನು ನಾವಿಕರು ಸಮುದ್ರದ ಮರದ ಹೊಟ್ಟು (Sea-Sawdust) ಎಂದು ಹೆಸರಿಸಿದ್ದರೆಂದು ಕ್ಯಾಪ್ಟನ್ ಕುಕ್ ಬರೆದಿದ್ದಾನೆ.

ಹಿಂದೂ ಮಹಾಸಾಗರದಲ್ಲಿರುವ ಕೀಲಿಂಗ್ ಅಡಲಿನ (ಆಳವಿಲ್ಲದ ನೀರನ್ನು ಸುತ್ತುವರೆದಿರುವ ಹವಳದ ದಿಬ್ಬ) ಬಳಿ ನಾನು ಹಲವು ಕೆಲವು ಚದರ ಅಂಗುಲವಷ್ಟೆ ಇರುವ ಪುಟ್ಟ, ಪುಟ್ಟ ಪಾಚಿಗಳನ್ನು ಕಂಡೆ. ಬರಿಗಣ್ಣಿಗೆ ಕಾಣದ ಅತಿ ಸೂಕ್ಷ್ಮವಾದ ಸಿಲಿಂಡರಿನಾಕಾರದ ನೂಲುಗಳಂತಿರುವ ಇವುಗಳ ಎರಡೂ ತುದಿಗಳಲ್ಲಿ ಶಂಖುವಿನಾಕಾರದೆ.  ದೊಡ್ಡ ಗಾತ್ರದ ವಸ್ತುವಿನ ಜೊತೆ ಬೆರೆತಿರುತ್ತವೆ. ಹೀಗೆ ಜೊತೆಯಾಗಿರುವ ಎರಡನ್ನು ಮೇಲೆ ಕಾಣಿಸಿದ್ದೇನೆ. ಇವುಗಳ ಉದ್ದ 0.4 ರಿಂದ 0.6 ಅಂಗುಲದವರೆಗೆ ಇರಬಹುದು. ಕೆಲವು 0.8 ಅಂಗುಲದವೂ ಇದ್ದುವು. ದಪ್ಪವೋ 0.006 ನಿಂದ 0.008 ಅಂಗುಲದಷ್ಟು. ಸಾಮಾನ್ಯವಾಗಿ ಸಿಲಿಂಡರಿನ ಒಂದು ಕೊನೆಯಲ್ಲಿ ಮರಳು-ಮರಳಾದ ವಸ್ತುವಿನಿಂದ ಮಾಡಿದ, ನಡುವೆ ತುಸು ದಪ್ಪನಾಗಿರುವ ಹಸಿರು ಪರದೆ ಇರುವುದನ್ನು ಕಾಣಬಹುದು. ಇದು ಹೊರಗಿನ ಪೆಟ್ಟಿಗೆಯ ಮೇಲೆ ಹೊದಿಕೆಯಾಗಿರುವ ಬಣ್ಣವಿಲ್ಲದ ತಿರುಳಿನಂತಹ ಮೃದು ವಸ್ತುವಿನಿಂದ ಮಾಡಿದ ಚೀಲದ ತಳಬದಿ ಎನ್ನುವುದು ನನ್ನ ಅಭಿಪ್ರಾಯ.  ಕೆಲವು ಜೀವಿಗಳಲ್ಲಿ ಈ ಪರದೆಯ ಜಾಗದಲ್ಲಿ ಕಂದು ಬಣ್ಣದ ಮರಳು-ಮರಳಾದ ಅಪ್ಪಟ ಚೆಂಡಿನಾಕಾರದ ಪುಟ್ಟ ಗುಂಡುಗಳಿವೆ. ಇವುಗಳು ರೂಪುಗೊಳ್ಳುವ ವಿಚಿತ್ರ ಪ್ರಕ್ರಿಯೆಯನ್ನು ನಾನು ಕಂಡೆ. ಒಳಗೆ ಲೇಪನವಾಗಿರುವ ತಿರುಳಿನಂತಹ ವಸ್ತುವು ಇದ್ದಕ್ಕಿದ್ದ ಹಾಗೆ ಒಂದುಗೂಡಿ ಗೆರೆಗಳಮತೆ ಆಗುತ್ತದೆ. ಇವುಗಳಲ್ಲಿ ಕೆಲವು ಕೇಂದ್ರವೊಂದರಿಂದ ಎಲ್ಲ ದಿಕ್ಕುಗಳಿಗೂ ಚಾಚಿಕೊಳ್ಳುತ್ತವೆ. ಹಾಗೆಯೇ ಮುಂದುವರೆದ ಅದು ತಟಕ್ಕನೇ ಅತಿ ವೇಗವಾಗಿ, ಹೇಗೆ ಹೇಗೋ ಸಂಕುಚಿಸಲು ತೊಡಗುತ್ತದೆ.  ಹೀಗೆ ಕ್ಷಣಾರ್ಧದಲ್ಲಿ ಅವೆಲ್ಲವೂ ಗುಂಡಗಾಗಿ ಕೊಳವೆಯ ತುದಿಯಲ್ಲಿರುವ ಪರದೆಯ ಜಾಗವನ್ನು ಆಕ್ರಮಿಸುವ ಚೆಂಡಾಗುತ್ತದೆ. ಗಾಯವೇನಾದರೂ ಆಗಿದ್ದಲ್ಲಿ ಈ ತರಿತರಿಯಾದ ಗುಂಡು ಇನ್ನೂ ಚುರುಕಾಗಿ ರೂಪುಗೊಳ್ಳುವುದು. ಕೆಲವೊಮ್ಮೆ ಈ ಕಾಯಗಳಲ್ಲಿ ಎರಡು ಸೇರಿಕೊಂಡು ಪರದೆಯಿರುವ ತುದಿಯಲ್ಲಿ ಮೇಲೆ ಕಾಣಿಸಿದಂತೆ, ಶಂಖುವಿನ ಪಕ್ಕ ಇನ್ನೊಂದು ಶಂಖುವಿನಂತೆ ಜೋಡಿಯಾಗಿ ಅಂಟಿಕೊಳ್ಳುವುದೂ ಉಂಟು.

ಜೈವಿಕ ಕಾರಣಗಳಿಂದ ಸಮುದ್ರದ ನೀರು ಬಣ್ಣಗೆಡುವ ಇನ್ನೂ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಬಲ್ಲೆ. ಚಿಲಿ ದೇಶದ ಕರಾವಳಿಯಲ್ಲಿ, ಕಂಸೆಪ್ಶನ್ ಬಂದರಿಗೆ ಕೆಲವು ಲೀಗ್ ಉತ್ತರ ದಿಕ್ಕಿನಲ್ಲಿ ಸಾಗುವಾಗ ಒಂದು ದಿನ ಬೀಗಲ್ ಪ್ರವಾಹದಲ್ಲಿರುವ ನದಿಯಂತಿದ್ದ ಕೆಸರಿನ ಹಾಳೆಗಳನ್ನು ಹಾದು ಸಾಗಿತು. ಅನಂತರ ವಲ್ಪರೈಸೋಗೆ ಒಂದು ಡಿಗ್ರೀ ದಕ್ಷಿಣ ದಿಕ್ಕಿನಲ್ಲಿ, ತೀರದಿಂದ ಸುಮಾರು 50 ಮೈಲು ದೂರದಲ್ಲಿ ಇನ್ನೂ ವಿಸ್ತಾರವಾದ ಪ್ರದೇಶದಲ್ಲಿ ಇದೇ ದೃಶ್ಯವನ್ನು ಕಂಡೆವು. ಗಾಜಿನ ಲೋಟೆಯಲ್ಲಿಟ್ಟ ಈ ನೀರಿಉ ತೆಳುಗೆಂಪು ಬಣ್ಣದ್ದಾಗಿತ್ತು. ಸೂಕ್ಷ್ಮದರ್ಶಕದ ಅಡಿಯಲ್ಲಟ್ಟು ಪರೀಕ್ಷಿಸಿದಾಗ ಅತ್ತಿಂದಿತ್ತ ಓಡಾಡುತ್ತಿದ್ದ ಪುಟ್ಟ ಜೀವಿಗಳಿಂದ ತುಂಬಿ ತುಳುಕಾಡಿತ್ತು. ಇವುಗಳಲ್ಲಿ ಕೆಲವು ಸಿಡಿದು ಬಿರಿಯುತ್ತಿದ್ದುವು. ಮೊಟ್ಟೆಯಾಕಾರದ ಇವುಗಳ ನಡುಭಾಗವು ಕಂಪಿಸುತ್ತಿದ್ದ ಬಾಗಿದ ಸೀಲಿಯಾಗಳ ಬಳೆಯಿಂದಾಗಿ ಕಿರಿದಾಗಿತ್ತು. ಇವನ್ನು ಸೂಕ್ಷ್ಮವಾಗಿ ಗಮನಿಸುವುದು ಬಹಳ ಕಷ್ಟವಾಗಿತ್ತು. ಏಕೆಂದರೆ ನಾವು ನೋಡು-ನೋಡುತ್ತಿದ್ದ ಹಾಗೆಯೇ ಚಲಿಸುವುದು ನಿಂತ ತಕ್ಷಣವೇ ಇವುಗಳ ದೇಹವು ಬಿರಿದು ಸ್ಫೋಟಿಸುತ್ತಿತ್ತು. ಕೆಲವೊಮ್ಮೆ ಎರಡೂ ತುದಿಗಳಲ್ಲೂ ಒಮ್ಮೆಲೇ ಬಿರಿಯುತ್ತಿದ್ದುವು. ಕೆಲವು ಒಂದೇ ತುದಿಯಲ್ಲಿ ಬಿರಿಯುತ್ತಿದ್ದುವು. ಅಲ್ಲಿಂದ ಕಂದುಬಣ್ಣದ ಮರಳು-ಮರಳಾದ ವಸ್ತುವೊಂದು ಹೊರಸುರಿಯುತ್ತಿತ್ತು. ಹೀಗೆ ಬಿರಿಯುವುದಕ್ಕೆ ಮುನ್ನಾ ಕ್ಷಣದಲ್ಲಿ ಈ ಜೀವಿಯು ತನ್ನ ಗಾತ್ರದಲ್ಲಿ ಅರ್ಧಕ್ಕರ್ಧ ಕುಗ್ಗಿಬಿಡುತ್ತಿತ್ತು. ಅವುಗಳ ವೇಗದ ಚಲನೆಯು ನಿಂತ ಹದಿನೈದು ಸೆಕೆಂಡುಗಳೊಳಗೆ ಈ ವಿಸ್ಫೋಟ ಸಂಭವಿಸುತ್ತಿತ್ತು. ಸ್ಫೋಟಿಸುವ ಮುನ್ನ ಅವುಗಳಲ್ಲಿ ಕೆಲವು ತಮ್ಮ ಉದ್ದದ ಗುಂಟ ಗಿರಗಿರನೆ ತಿರುಗುತ್ತಿದ್ದುವು. ನೀರಿನ ಹನಿಯಲ್ಲಿ ಇವುಗಳಲ್ಲಿ ಒಂದಷ್ಟನ್ನು ಹಾಕಿದ ಎರಡು ನಿಮಿಷಗಳೊಳಗೆ ಅವು ಹೀಗೆ ನಾಶವಾಗುತ್ತಿದ್ದುವು. ಈ ಪ್ರಾಣಿಗಳು ತಮ್ಮ ಕಿರಿದಾದ ತುದಿಯನ್ನು ಮುಂದಿಟ್ಟುಕೊಂಡು, ಸೀಲಿಯಗಳ ಚಲನೆಯ ನೆರವಿನಿಂದ ಚಲಿಸುತ್ತಿದ್ದುವು. ಸಾಧಾರಣವಾಗಿ ತಟಕ್ಕನೇ ವೇಗವಾಗಿ ಮುಂದೆ ಹೋಗುತ್ತಿದ್ದುವು. ಅವು ಬರಿಗಣ್ಣಿಗೆ ಕಾಣದಷ್ಟು ಪುಟ್ಟವು. ಅಂಗುಲದ ಸಾವಿರದೊಂದಂಶದಷ್ಟು ದೊಡ್ಡವು.. ಆದರೆ ಅವುಗಳ ಸಂಖ್ಯೆ ಮಾತ್ರ ಅಗಣಿತ. ನಾನು ಹೊರತೆಗೆದ ಅತಿ ಸಣ್ಣ ಹನಿಯಲ್ಲೂ ಬೇಕಾದಷ್ಟು ಜೀವಿಗಳಿದ್ದುವು. ಒಂದೇ ದಿನದಲ್ಲಿ ನಾವು ಹೀಗೆ ಬಣ್ಣಗೆಟ್ಟ ಎರಡು ಸ್ಥಳಗಳನ್ನು ದಾಟಿ ಹೋದೆವು. ಇದರಲ್ಲಿ ಒಂದಂತೂ ಹಲವು ಚದರ ಮೈಲುಗಳಷ್ಟು ವಿಸ್ತಾರವಾಗಿ ಹರಡಿಕೊಂಡಿತ್ತು. ಈ ಸೂಕ್ಷ್ಮ ಜೀವಿಗಳದೆಷ್ಟು ಸಂಖ್ಯೆ! ಲೆಕ್ಕ ಮಾಡಲಾರದಷ್ಟು! ಇವುಗಳಿದ್ದ ನೀರಿನ ಬಣ್ಣ ಹೇಗಿತ್ತೆಂದರೆ ನದಿಯೊಂದು ಕೆಸರಿನಿಂದ ಹಾದು ಬಂದಂತೆ ಕೆಂಪಗೆ ಕಾಣುತ್ತಿದ್ದುವು  ಆದರೆ ಹಡಗಿನ ತಳದಲ್ಲಿನ ನೆರಳಿನಲ್ಲಿ ಅದು ಕಡುಗಪ್ಪು ಚಾಕಲೇಟು ಬಣ್ಣದ್ದಾಗಿತ್ತು. ಸಾಗರದ ನೀಲಿಯ ನೀರು ಹಾಗೂ ಈ ಕೆಂಪನೆಯ ನೀರು ಸಂಗಮವಾಗುತ್ತಿದ್ದ ಜಾಗ ಸುಸ್ಪಷ್ಟವಾಗಿ ಕಾಣುತ್ತಿತ್ತು. ಹಿಂದಿನ ಕೆಲವು ದಿನಗಳು ಹವಾಮಾನವೂ ಶಾಂತವಾಗಿತ್ತಾಗಿ  ಸಾಗರವೆಲ್ಲವೂ ಅಸಾಧಾರಣ ಸಂಖ್ಯೆಯಲ್ಲಿದ್ದ ಇಂತಹ ಜೀವಿಗಳಿಂದ ತುಂಬಿಹೋಗಿತ್ತು.

ಟಿಯೆರಾ ಡೆಲ್ಫ್ಯೂಗೋದ ನೆರೆಹೊರೆಯಲ್ಲಿ ತೀರದಿಂದ ಅಷ್ಟೇನು ದೂರವಿಲ್ಲದಿದ್ದ ಸಮುದ್ರದ ನೀರಿನಲ್ಲಿ ದೊಡ್ಡ ಸೀಗಡಿಯನ್ನು ಹೋಲುವ ಹಲವು ಕಠಿಣಚರ್ಮಿ ಜೀವಿಗಳಿಂದಾಗಿ ರೂಪುಗೊಂಡ ತೆಳುವಾದ ಅಚ್ಚಕೆಂಪು ಬಣ್ಣದ ಗೆರೆಗಳನ್ನು ನಾನು ಕಂಡಿದ್ದು ಉಂಟು. ನೀರುನಾಯಿ ಹಿಡಿಯುವವರು ಇವನ್ನು ತಿಮಿಂಗಲಗಳ ಆಹಾರ ಎಂದು ಕರೆಯುತ್ತಾರೆ. ತಿಮಿಂಗಲಗಳು ಅವನ್ನು ತಿನ್ನುತ್ತವೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ಕಡಲ ಕೆಲವು ತೀರಗಳಲ್ಲಿ ಟರ್ನುಗಳು, ಕಾರ್ಮೊರಾಂಟು ಹಾಗೂ ದೊಡ್ಡ ದೊಡ್ಡ ನೀರುನಾಯಿಗಳ ಹಿಂಡುಗಳಿಗೆ ಈ ಈಜುವ ಏಡಿಗಳೇ ಪ್ರಧಾನ ಆಹಾರ.  ನೀರು ಈ ರೀತಿ ಬಣ್ನಗೆಡುವುದಕ್ಕೆ ಈ ಜೀವಿಗಳು ಮೊಟ್ಟೆಯಿಟ್ಟಿರುವುದೇ ಕಾರಣ ಎನ್ನುತ್ತಾರೆ ನಾವಿಕರು.   ಒಂದು ಸಂದರ್ಭದಲ್ಲಿ ಮಾತ್ರ ಇದು ಸತ್ಯವೆಂದು ನಾನು ಕಂಡೆ.  ಗಲಪಾಗೋ ಭೂಶಿರದಿಂದ ಹಲವು ಲೀಗುಗಳ ದೂರದಲ್ಲಿ ನಮ್ಮ ಹಡಗು ಕೆಸರು ತುಂಬಿದ ನೀರಿನಂತೆ ಕಾಣುವ ಸ್ವಲ್ಪ ಕಡು ಹಳದಿ ಬಣ್ಣದ ಮೂರು ಪಟ್ಟೆಗಳನ್ನು ಹಾದು ಸಾಗಿತು. ಈ ಪಟ್ಟೆಗಳು ಹಲವು ಮೈಲುಗಳ ಉದ್ದ ಹಾಗೂ ಹಲವು ಗಜಗಳಷ್ಟು ಅಗಲವಿದ್ದುವು. ಪಟ್ಟೆಗಳ ಅಂಚು ನೀರಿನಿಂದ ಸ್ಪಷ್ಟವಾಗಿ ಬೇರೆಯಾಗಿತ್ತು. ಈ ಬಣ್ಣವನ್ನುಂಟು ಮಾಡಿದ್ದು ಸುಮಾರು ಒಂದಿಂಚಿನ ಐದರಲ್ಲೊಂದು ಭಾಗದಷ್ಟು ವ್ಯಾಸ ಇರುವ ಪುಟ್ಟ ಜೆಲ್ಲಿ ಚೆಂಡುಗಳು. ಇವುಗಳಲ್ಲಿ ಅಸಂಖ್ಯ ಗುಬುಟಗಳಂತಹ ಮುಳ್ಳುಗಳಿದ್ದುವು. ಇವುಗಳಲ್ಲಿ ಎರಡು ಬಗೆಗಳಿದ್ದುವು. ಕೆಂಪು ಬಣ್ಣದ್ದೊಂದು ಹಾಗೂ ಇನ್ನೊಂದರ ಆಕಾರ ಬೇರೆಯಾಗಿತ್ತು. ಈ ಪ್ರಾಣಿಗಳು ಯಾವುವೆಂಬುದನ್ನು ಊಹಿಸಲು ನನಗೆ ಸಾಧ್ಯವಾಗಲಿಲ್ಲ. ಕ್ಯಾಪ್ಟನ್ ಕಾಲ್ನೆಟ್ ಈ ರೀತಿಯ ವಿದ್ಯಮಾನಗಳು ಗಲಪಾಗೋ ದ್ವೀಪಗಳಲ್ಲಿ ಸಾಮಾನ್ಯ ಎಂದೂ, ಪಟ್ಟೆಗಳ ದಿಕ್ಕು ಸಾಗರ ಪ್ರವಾಹಗಳ ದಿಕ್ಕನ್ನು ತಿಳಿಸುತ್ತವೆಂದೂ ಹೇಳಿದರು. ನಾನೀಗ ವಿವರಿಸುತ್ತಿರುವ ಪಟ್ಟೆಯನ್ನುಂಟು ಮಾಡಿದ್ದು ಗಾಳಿ. ಇದಲ್ಲದೆ ನಾನು ಕಂಡ ಮತ್ತೊಂದು ಗಮನಾರ್ಹ ನೋಟವೆಂದರೆ ನೀರಿನ ಮೇಲೆ ತೆಳುವಾಗಿ ಹರಡಿ, ಬಣ್ಣಗಳಿಂದ ಮಿರುಗುತ್ತಿದ್ದ ಎಣ್ಣೆಯಂತಹ ಪದರ. ಬ್ರೆಜಿಲ್ಲಿನ ಕರಾವಳಿಯಲ್ಲಿ ಬಹಳಷ್ಟು ಪ್ರದೇಶಗಳು ಹೀಗೆ ಆವೃತವಾಗಿದ್ದುದನ್ನು ನಾನು ಕಂಡೆ.  ಎಲ್ಲೋ ಹತ್ತಿರದಲ್ಲಿ ತೇಲುತ್ತಿರುವ ಕೊಳೆತ ತಿಮಿಂಗಲದ ಶವದಿಂದಾಗಿ ಇದುಎನ್ನುವುದು ನಾವಿಕರ ಹೇಳಿಕೆ.  ಇಲ್ಲಿ ನಾನು ನೀರಿನಲ್ಲಿ ಎಲ್ಲೆಡೆಯೂ ಹರಡಿಕೊಂಡಿರುವ ಸೂಕ್ಷ್ಮವಾದ ಜೆಲ್ಲಿಯಂತಹ ಕಣಗಳ ಬಗ್ಗೆ ಹೇಳುವುದಿಲ್ಲ. ಏಕೆಂದರೆ ಅವುಗಳ ಸಂಖ್ಯೆ ನೀರಿನ ಬಣ್ಣಗೆಡಿಸುವಷ್ಟು ಹೆಚ್ಚಿಲ್ಲ. ಇವುಗಳ ಬಗ್ಗೆ ಅನಂತರ ಹೇಳುವೆ. ಆದರೆ ಮೇಲಿನ ವಿವರಣೆಯಲ್ಲಿ ಎರಡು ಬೆರಗುಗೊಳಿಸುವ ಅಂಶಗಳು ಇವೆ. ಮೊದಲನೆಯದಾಗಿ ಈ ರೀತಿಯ ಪಟ್ಟೆಗೆ ಕಾರಣವಾದ ವಿವಿಧ ಜೀವಿಗಳು ಸ್ಪಷ್ಟವಾದ ಅಂಚುಗಳಿರುವಂತೆ ಹೇಗೆ ಜೊತೆಯಾಗುತ್ತವೆ? ಸೀಗಡಿಯಂಥಹ ಏಡಿಗಳ ಚಲನೆಗಳಂತೂ ಸೈನಿಕರ ತುಕಡಿಯಂತೆ ಏಕತಾಳವಾಗಿದ್ದುವು. ಇಂತಹ ಉದ್ದೇಶಪೂರ್ವಕ ಚಲನೆಗಳು ಮೊಟ್ಟೆಗಳಲ್ಲಾಗಲಿ, ಅಥವಾ ಪಾಚಿಯಂತಹ ಸಸ್ಯಗಳಲ್ಲಾಗಲಿ ಆಗುವುದಿಲ್ಲ. ಹಾಗೆಯೇ ಇತರೆ ಕಣಗಳಿಂದಲೂ ಅಲ್ಲ. ಎರಡನೆಯ ಕುತೂಹಲದ ಅಂಶವೇನೆಂದರೆ ಈ ಪಟ್ಟೆಗಳ ಉದ್ದ ಮತ್ತು ಅಗಲ ಹೀಗಿರುವುದಕ್ಕೆ ಕಾರಣವೇನು? ಇವುಗಳು ಸುಳಿಗಳಲ್ಲಿ ಹುಟ್ಟಿದ ನೊರೆ, ಗಾಳಿ ಇಲ್ಲವೇ ಅಲೆಯ ಹೊಡೆತಕ್ಕೆ ಸಿಕ್ಕು ಉದ್ದುದ್ದ ಗೆರೆಗಳಾಗುವಂತೆಯೇ ತೋರುತ್ತವಾದ್ದರಿಂದ ಇವೂ ಕೂಡ ಅಂತಹುದೇ ಕ್ರಿಯೆಯಿಂದ ಉಂಟಾಗಿರಬಹುದೆಂದು ನಾನು ಹೇಳಬಲ್ಲೆ. ಈ ಪ್ರಕಾರ ಕೆಲವು ಅನುಕೂಲಕರ ಪ್ರದೇಶಗಳಲ್ಲಿ ಒಟ್ಟಾಗಿ ಹುಟ್ಟುವ ಕಾಯಗಳನ್ನು ಅಲ್ಲಿಂದ ಗಾಳಿಯೋ ಅಲೆಗಳೋ ದೂರ ತಳ್ಳಿವೆ ಎಂದು ಹೇಳಬಹುದು. ಆದರೆ ಹೀಗೆ ಕೋಟ್ಯಂತರ ಜೀವಿಗಳು ಹಾಗೂ ಪಾಚಿಸಸ್ಯಗಳು ಒಂದೇ ಸ್ಥಳದಲ್ಲಿ ಹುಟ್ಟುತ್ತವೆ ಎಂದು ಊಹಿಸುವುದೂ ಕಷ್ಟ ಎಂದು ನನಗೂ ಗೊತ್ತು. ಹಾಗಿದ್ದರೆ ಈ ಜೀವಿಗಳು ಎಲ್ಲಿಂದ ಬಂದುವು? ಇವುಗಳ ತಂದೆ-ತಾಯಂದಿರ ದೇಹಗಳನ್ನು ಗಾಳಿ, ಅಲೆಗಳು ದೂರದೂರಕ್ಕೆ ಬೇರ್ಪಡಿಸಿ ಬಿಟ್ಟಿರುತ್ತವಲ್ಲವೇ? ಇವುಗಳು ಹೀಗೆ ಒಂದು ಪಟ್ಟೆಯಲ್ಲಿ ಒಟ್ಟಾಗಿರುವುದನ್ನು ಅರ್ಥೈಸುವ ಬೇರಾವ ವಿವರಣೆಯೂ ನನಗೆ ಕಾಣುತ್ತಿಲ್ಲ. ಉತ್ತರ ಧ್ರುವ ಸಾಗರ, ಆರ್ಕ್ಟಿಕ್ ಸಮುದ್ರದ ಕೆಲವು ಭಾಗಗಳಲ್ಲಿ ತೇಲುವ ಪ್ರಾಣಿಗಳಿಂದ ಸಮೃದ್ಧವಾದ ಹಸಿರು ಬಣ್ಣದ ನೀರು ಇರುತ್ತದೆ ಎಂದು ಸ್ಕೋರ್ಬಿ ಹೇಳಿದ್ದಾನೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

_________________________________

ಅನುವಾದಕರ ಟಿಪ್ಪಣಿ:

ವಾರಕ್ಕೆ ಒಮ್ಮೆಯೋ, ಎರಡು ಬಾರಿಯೋ ಚಾರ್ಲ್ಸ್ ಡಾರ್ವಿನ್ನನ ಸಾಹಸಯಾತ್ರೆಯ ದಿನಚರಿಯಲ್ಲಿನ ತುಣುಕುಗಳನ್ನು ಅನುವಾದಿಸಿ ಜಾಣಬಂಡಿಯಲ್ಲಿ ಸೇರಿಸುವ ಪ್ರಯತ್ನ ನಡೆಯಲಿದೆ. ವಿಜ್ಞಾನದ ತತ್ವಗಳನ್ನು ಅರಿಯಲು ನೆರವಾದ ಮಹನೀಯರುಗಳು ಪಟ್ಟ ಕಷ್ಟ, ಸಾಹಸಗಳು ನಮಗೆ ತಿಳಿದಿದ್ದರೆ ಆ ತತ್ವಗಳು ಹೇಗೆ, ಏಕೆ ಬಂದುವು ಎನ್ನುವ ಬಗ್ಗೆ ವೃಥಾ ವಾದ ಮಾಡುವುದು ನಿಲ್ಲಬಹುದು. ಇದೋ ಮೊದಲ ಕಂತು ಇಲ್ಲಿದೆ.

ಈ ಪುಟ್ಟ ಬರಹದಲ್ಲಿ ಅಡಕವಾದ ಹಲವು ಸಂಗತಿಗಳು ಕೌತುಕಮಯವಾದಂಥವು. ಉದಾಹರಣೆಗೆ ಇದೀಗ ಸ್ಪೇನ್ ದೇಶದ ಆಡಳಿತಕ್ಕೆ ಒಳಪಟ್ಟಿರುವ ಕ್ಯಾನರಿ ದ್ವೀಪಗಳು ಜ್ವಾಲಾಮುಖಿಯ ಬಿಸಿ ಶಿಲಾರಸ ಉಕ್ಕಿ ಹರಿದು ಆದಂಥವು. ಜ್ವಾಲಾಮುಖಿಗಳಿಂದಾಗಿ ಹವಳದ ದ್ವೀಪಗಳು ಹೇಗಾದುವು ಎನ್ನುವ ಬಗ್ಗೆಯೂ ಚಾರ್ಲಸ್ ಡಾರ್ವಿನ್ ಹೊಸ ಚಿಂತನೆಯನ್ನು ಮೂಡಿಸಿದ್ದ ಎನ್ನುವುದನ್ನು ನೆನಪಿಸಿಕೊಂಡರೆ, ಆತನಿಗೆ ಈ ದ್ವೀಪ ಸಮೂಹದ ಬಗೆಗಿನ ಕುತೂಹಲ ಏಕೆಂದು ವಿವರಿಸಬೇಕಿಲ್ಲ.

ಬರಹದ ಶೈಲಿಯನ್ನು ಗಮನಿಸಿ. ಇದು ಅಂದಿನ ಕಾಲಕ್ಕೆ ಅಪ್ಪಟ ವಿಜ್ಞಾನ ಬರೆಹವಾಗಿದ್ದರೂ, ಓದುಗರಿಗೆ ಪ್ರಿಯವಾಗುವಂತಹ ಸುಂದರ ಭಾಷೆಯಲ್ಲಿದೆ.

ಅಧ್ಯಾಯದ ಕೊನೆಗೆ ಡಾರ್ವಿನ್ ವಿವರಿಸುವ  ಏಡಿಗಳಂತಹ ಜೀವಿಗಳಿಂದಾದ ಬಣ್ಣದ ಪಟ್ಟೆಗಳ ವರ್ಣನೆಯನ್ನು ಗಮನಿಸಿ. ಆ ಹಿಂದಿನ ಕೆಲವರ ವಿವರಣೆಗಳನ್ನು ಪ್ರಶ್ನಿಸುವ ಹಾಗೂ ಇಷ್ಟೊಂದು ಜೀವಿಗಳು ಒಮ್ಮೆಗೇ ಜನ್ಮ ತಾಳುವುದು ಸಾಧ್ಯವೇ ಎನ್ನುವ ಪ್ರಶ್ನೆ ಅವನ ಮನದಲ್ಲಿ ಎದ್ದುದನ್ನು ಗಮನಿಸಿ. ಈ ಪ್ರಶ್ನೆಯೇ ಮುಂದೆ ವಿಕಾಸ ವಾದದಲ್ಲಿ ಅಪರಿಮಿತ ಸಂತಾನೋತ್ಪತ್ತಿಯ ಕಲ್ಪನೆ ಮೂಡಲು ಪ್ರೇರಣೆಯಾಗಿರಬೇಕು. ಮೇಧಾವಿಗಳ ಮನಸ್ಸು ಇದ್ದಕ್ಕಿದ್ದ ಹಾಗೆ ಹೊಸತನ್ನು ಪರಿಕಲ್ಪಿಸಲಾರವು. ಈಗಾಗಲೇ ಇರುವ ವಾಸ್ತವಗಳನ್ನು ಪ್ರಶ್ನಿಸುತ್ತಾ, ಹೊಸ ಹೊಳಹುಗಳನ್ನು ಕಂಡಕೊಳ್ಳುತ್ತವೆ ಎನ್ನುವ ಮಾತು ಸತ್ಯ. ಅಲ್ಲವೇ?

ಸ್ಟೀಫನ್ ಹಾಕಿಂಗ್..!

ವಾವ್…ಸ್ಟೀಫನ್ ಹಾಕಿಂಗ್..!
●●●●●●●●●●●●●●●●
ನೆಲ ಬಿಟ್ಟು ಹೊರಟಿದೆ
ಕಾಲ ಪಯಣದ ವಾಹನ
ಸ್ಟೀಫನ್ ಹಾಕಿಂಗ್ ಮತ್ತವನ
ಗಾಲಿ ಕುರ್ಚಿ ಹೊತ್ತು
ವರ್ತಮಾನದ ಕೌತುಕಗಳಿಗೆ
ಪ್ರಜ್ಞೆಯಾಗಿ
ಭವಿಷ್ಯದ ಕನಸುಗಳಿಗೆ
ಸಾಕ್ಷಿಯಾಗಿ
ಚಂದ್ರ ,ತಾರೆ ,ಮಂಗಳ
ಅನ್ಯ ಗ್ರಹಗಳ ಅಂಗಳ…
ಹಾಕಿಂಗ್ ಬರುವಿಕೆಗೆ ಕಾದಿವೆ
ಭೌತ ಶಾಸ್ತ್ರದ ಕಿಟ್ ಹಿಡಿದು
ಬಾ ಬೇಗ ಸ್ಟೀವ್ ಎಂದು

ಕಪ್ಪುರಂಧ್ರಗಳು ಬೆಪ್ಪಾಗಿವೆ
ವಿಜ್ಞಾನಿ ಹೊರಟ ಸುದ್ದಿ ಕೇಳಿ
ಅಗೋ…
ನರನಾಡಿಗಳ ಮಹಾಮೌನದ ನಡುವೆ
ಸತ್ಯದ ‘ ಮಹಾಸ್ಪೋಟ’..!
ಪರಮಾಣುವಿನ ಮೌಢ್ಯ ಛಿದ್ರ ಛಿದ್ರ
ಹರೆಯದ ಕನಸುಗಳಲ್ಲಿ
ಬಿಸಿಯಾಯ್ತು ಕ್ವಾಂಟಮ್
ಕಸಿ ಕಟ್ಟಿದ ಜೀವದ ಸುತ್ತ
ಮಸಿಯ ಕಲೆಯಿಲ್ಲ
ಕಾಲದ ಪಯಣದಲಿ ಈಗ
ಸಣ್ಣ ವಿರಾಮವಷ್ಟೇ..
ಇಂದಿನ ಮೌನ ಮುಂದೆ ಮಾತಾಗಲಿದೆ
ಹಿಂದೆ ಸಿಡಿದ ಸತ್ಯದಂತೆ

ಭೂಗ್ರಹದ ನೋವು ಕಣ್ಣೀರ ಹನಿಯಲ್ಲಿ
ಮೇಲೆ , ಆಕಾಶದಲ್ಲಿ ಆನಂದ ಭಾಷ್ಪ
ಸ್ಟೀವ್ ನಿರೀಕ್ಷೆಯಲ್ಲಿ
ಪ್ರಮೇಯ, ಸೂತ್ರ, ಸಿದ್ಧಾಂತದ ಬೇರುಗಳು
ಅಪ್ಪಿ ಹಿಡಿದಿದೆ ಮಣ್ಣ ಕಣಕಣವನ್ನ
ಅಷ್ಟು ಸುಲಭದಲ್ಲಿ ಬಿಡದು ನಿನ್ನ

ಮೌನ ನಿನಗೆ ಹೊಸತಲ್ಲ
ಸದ್ಯದ ಈ ವಿರಾಮ ಹೊಸತು
ಹೋಗಿ ಬಾ ಸ್ಟೀವ್…
ಅನ್ಯಗ್ರಹಗಳು ಇನ್ನೂ ಮಲಿನಗೊಂಡಿಲ್ಲ
ನಿನ್ನಂತೆ…
ಆದರೆ ಹೋಗುವ ಮುನ್ನ
ನನ್ನದೊಂದು ಆಸೆ..
ಆ ಗಾಲಿ ಕುರ್ಚಿ ನನಗಾಗಿ
ಬಿಟ್ಟು ಹೋಗುವೆಯ..?
ಆದರಲ್ಲೊಮ್ಮೆ ನಾ ಕೂರಬೇಕು….

■ ವರದ

_——

ಶಿಕ್ಷಕರೆಂದರೆ ಒಂದು ಪ್ರೇರಣಾ ಶಕ್ತಿ. ಅಂತಹ ಮಹಾನ್ ಶಿಕ್ಷಕನೊಬ್ಬನಿಗೆ ನಮ್ಮಿಬ್ಬರು ಶಿಕ್ಷಕರು ಸಲ್ಲಿಸಿದ ನಮನ ಇದು. ಚಿತ್ರ. ಮೋಹನ್ ಕುಮಾರ್ ಆರಾಧ್ಯ, ಕವಿತೆ: ವರದ

ವಿಜ್ಞಾನ ಮತ್ತು ಕಲೆ

ಸೈನ್ಸ್ ಪತ್ರಿಕೆಯ ಈ ವಾರದ ಸಂಚಿಕೆಯ ಈ ಮುಖಪುಟ ಮೇಲ್ನೋಟಕ್ಕೆ ದೀಪಾವಳಿಯ ಪಟಾಕಿಯಂತೆ ತೋರುತ್ತಿದೆಯಲ್ಲವೇ? ಅಲ್ಲ ಇದು ಕಲೆ. ಬಹುಶಃ ಇದನ್ನು ಮಾಹಿತಿ ಕಲೆ ಎನ್ನಬಹುದು. ಬಲು ಸಂಕೀರ್ಣ ಸಂಬಂಧಗಳಿರುವ ಮಾಹಿತಿಯನ್ನು ಹೀಗೆ ಚಿತ್ರರೂಪಕ್ಕೆ ದರ್ಶಿಸಿಕೊಂಡು ವಿಶ್ಲೇಷಣೆ ಮಾಡುವುದು ವಿಜ್ಞಾನದ ಹೊಸ ತಂತ್ರ.

ಈ ಚಿತ್ರ ಸುಳ್ಳು ಸುದ್ದಿ ಹಾಗೂ ವಾಸ್ತವಾಂಶಗಳು ಟ್ವಿಟ್ಟರಿನಲ್ಲಿ ಹರಡುವ ಬಗೆಯನ್ನು ತೋರಿಸುತ್ತಿದೆ. ಪ್ರಖರವಾಗಿ ಉರಿಯುತ್ತಿರುವ ಬಿಳೀ ಬೆಳಕು ಸುಳ್ಳುಸುದ್ದಿ. ಕೆಳಗೆ ಇರುವ ನೀಲಿ ಪಟಾಕಿ ಸತ್ಯದ ಸುದ್ದಿ. ಇವುಗಳು ಹರಡುವ ವೇಗ, ಪ್ರಭಾವದ ವ್ಯಾಪ್ತಿ, ಎಲ್ಲವನ್ನೂ ಓದಲು ಬರದವರೂ ಸ್ಪಷ್ಟವಾಗಿ ತಿಳಿಯಬಹುದು. ಈ ಕಲೆಗಾರಿಕೆಗೆ ವಿಜ್ಞಾನಿಗಳ ಆಶಯ, ದತ್ತಾಂಶಗಳನ್ನು ವಿಶ್ಲೇಷಿಸುವ ತಂತ್ರಾಂಶಗಳು ಹಾಗೂ ಅವನ್ನು ದರ್ಶಿಸುವ (Visualize) ತಂತ್ರಾಂಶಗಳು ಹಾಗೂ ಕಲಾವಿದನ ಸ್ಪೂರ್ತಿ ಬೇಕು.

ಜ್ವರ

ಅಂದು ೭ ನೇ ತರಗತಿಯ ಮೊದಲನೇ ಅವಧಿ ನನ್ನದೇ ಆಗಿತ್ತು ತರಗತಿಗೆ ಹೋದೊಡನೆ ಹಾಜರಾತಿ ತೆಗೆದುಕೊಳ್ಳತೊಡಗಿದೆ , ರಾಜು ಮೂರು ದಿನಗಳಿಂದ ಶಾಲೆಗೆ ಬಂದಿರದವನು ಇಂದು ಶಾಲೆಗೆ ಬಂದಿದ್ದ , ಯಾಕೋ ರಾಜು ಮೂರು ದಿನ ಬಂದಿಲ್ಲ ಹೋಗು ನಿನ್ನ ತಂದೆಯನ್ನು ಕರೆದುಕೊಂಡು ಬಾ ಎನ್ನುವಷ್ಟರಲ್ಲಿ ಅವನ ಸ್ನೇಹಿತ ಆಕಾಶ ಎದ್ದುನಿಂತು, ಸಾರ್ ಅವನಿಗೆ ಹುಶಾರಿಲ್ಲ ಸಾರ್ ಹಾಗಾಗಿ ಬಂದಿರಲಿಲ್ಲ ಎಂದ. ಹೌದೇನೋ ಸರಿ ಆಕಾಶ ನೀನು ಕುಳಿತುಕೋ ಎಂದೇಳಿ ರಾಜುವಿನ ಬಳಿ ತೆರಳಿದೆ. ರಾಜುವಿನ ಮುಖ ಸ್ವಲ್ಪ ಬಾಡಿತ್ತು , ಏನಾಯ್ತೂ ರಾಜು ಎಂದು ಅವನ ಕೊರಳಿಗೆ ಕೈ ಇಟ್ಟೆ ಜ್ವರದ ತಾಪ ಅನುಭವಕ್ಕೆ ಬಂತು. ಸಾರ್ ಛಳಿ ಜ್ವರ ಸಾರ್ ಎಂದು ಮೆಲ್ಲಗೆ ಉಸರಿದ . ಸರಿ ಆಸ್ಪತ್ರೆಗೆ ಹೋಗಿದ್ದ ಓಷಧಿ ತಗೊಂಡಾ ಎನ್ನುತ್ತ ಅವನ ಬೆನ್ನು ಸವರಿ ಕುಳಿತುಕೋ ಎಂದೆ. ರಾಜು ಹೌದು ಸಾರ್ ಎನ್ನುತ ಕುಳಿತ. ನಾನು ಬ್ಲಾಕ್‌ ಬೋರ್ಡ್ ಬಳಿ ತೆರಳಿ ಗಣಿತ ಪಾಠದ ಹೆಸರು ಬರೆದು ಅಡಿಗೆರೆ ಎಳೆವಷ್ಟರಲಿ ಸಂಜಯನು ಸಾರ್ ಅವನಿಗೆ ಸಕತ್ ಸೋಕಾಗಿದೆ ಸಾರ್ ನನ್ನ ಅಮ್ಮನೇ ಸೋಕು ತೆಗೆದರು ಅವನು ಹುಶಾರಾದ ಎಂದ. ನಾನು ಸೋಕು ಎನ್ನುವ ಪದವನ್ನು ಕೇಳಿರದಿದ್ದ ಕಾರಣ ಹಾಗೆಂದರೇನೋ ಸಂಜಯ್ ಹೇಳೋ ಸ್ವಲ್ಪ ಎನ್ನುತ ಅವನ ನೋಡತೊಡಗಿದೆ ತರಗತಿ ಮಕ್ಕಳೆಲ್ಲರು ಗೊಳೋ ಎಂದು ನಗಲಾರಂಬಿಸಿದರು! ಸೈಲೆನ್ಸ್ ಎಂದು ಗಟ್ಟಿಯಾಗಿ ಗುರಾಯಿಸಿದೆ ಸುಮನಾದರು.
ಸಾರ್ ಅದೇನಪ್ಪ ಅಂದ್ರೆ ನಾವು ಅಲ್ಲಿ ಇಲ್ಲಿ ಸುತ್ತಾಡಿದಾಗ ಕೆಟ್ಟ ಶಕ್ತಿಗಳು ನಮ್ಮನ್ನು ಮುಟ್ಟಿರ್ತವೆ ಸಾರ್, ಆಗ ನಮಗೆ ಜ್ವರ ಚಳಿ ಬರುತ್ತೆ ಆಗ ನಾವು ಸಪ್ಪೆ ಆಗ್ಬಿಡ್ತೀವಿ ಮನೆಯವರಿಗೆ ಗೊತ್ತಾಗುತ್ತೆ ಆಗ ಅವರು ಸೋಕು ತೆಗಿತಾರೆ ಅಂದ. ಸರಿ ಕಣೋ ಅದನ್ನೇ ಹೇಗ್ ತೆಗಿತಾರೆ ಹೇಳೋ ಅಂದಿದ್ದೆ ತಡ ನಾ ಹೇಳ್ತೀನಿ ನಾ ಹೇಳ್ತೀನಿ ಅಂತ ಕೂಗಾಟ ಶುರುವಾಯ್ತು ಮತ್ತೊಮ್ಮೆ ಸೈಲೆನ್ಸ್ ಅಂದೆ ಎಲ್ಲರೂ ಸುಮ್ಮನಾಗಿಬಿಟ್ಟರು. ರಕ್ಷಿತಾಳನ್ನು ನೋಡಿದೆ , ಅವಳು ಎದ್ದು ನಿಂತು , ನಮಗೆ ಜ್ವರ ಬಂದಾಗ ಸಂಜೆ ಆದ್ಮೇಲೆ ಒಂದು ತಟ್ಟೆಗೆ ನೀರು ಕುಂಕುಮ ಹಾಕಿ ಅದಕ್ಕೆ ಮೂರು ಬಣ್ಣದ ಹೂ ಹಾಕಿ ಸ್ವಲ್ಪ ಇದ್ದಿಲು ಹಾಕಿ ವೀಳ್ಯದೆಲೆ ಮೇಲೆ ಕರ್ಪೂರ ಹಚ್ಚಿ ಆರತಿ ತೆಗೆದು ಥೂ ಥೂ ಅಂತ ಮೂರು ಸಾರಿ ಉಗಿದು ಯಾರ ಕಣ್ಣು ಬೀಳದೆ ಇರಲಿ ಅಂದ್ಬಿಟ್ಟು ಮನೆ ಹೊರಗೆ ಇಡ್ತಾರೆ ಬೆಳಗ್ಗೆ ಅಷ್ಟೊತ್ತಿಗೆ ನಮ್ಮ ಜ್ವರನೂ ಕಮ್ಮಿ ಆಗಿರುತ್ತೆ ತಟ್ಟೆಯಲ್ಲಿದ್ದ ನೀರು ಕಮ್ಮಿ ಆಗಿರುತ್ತೆ ಕೆಂಪು ನೀರು ಬಿಳಿಯಾಗಿರುತ್ತದೆ ಸಾರ್ ನಮಗೆ ಸೋಕಿದ್ದ ದೆವ್ವ ಆ ಬಣ್ಣದ ನೀರು ಕುಡಿದುಹೊಗಿರುತ್ತೆ ಅಂತ ಒಂದೇ ಉಸಿರಿನಲಿ ಹೇಳಿ ಮುಗಿಸಿದಳು. ಅವಳ ಹೇಳಿದ್ದು ಕುತೂಹಲದಿಂದ ಕೂಡಿದ್ದರು ಕೊನೆಯ ಸಾಲು ಹಿಡಿಸಲಿಲ್ಲ .
ಮತ್ತೊಂದು ಪ್ರಶ್ನೆ ಹಾಕಿದೆ ಇವುಗಳಲ್ಲಿ ಯಾವುದು ಇಲ್ಲದಿದ್ದರೂ ಸೋಕು ತೆಗೆಯಾಬಹುದಾ ಎಂದಿದಕ್ಕೆ ಸಾರ್ ಹೂ , ವೀಳ್ಯದೆಲೆ ಇಲ್ಲದಿದ್ದರೂ ಆಗುತ್ತೆ ಎಂದಳು ಕೊನೆಬೆಂಚಿನ ಸುಗುಣ. ಸರಿ ನನಗೆ ಸೋಕು ತೆಗೆಯುವಿರಾ ಎನ್ನುತ್ತ ಬೋರ್ಡ್ ಮೇಲೆ ಬರೆದಿದ್ದ ಗಣಿತ ಪಾಟ ಅಳಿಸಿದೆ. ಸಾರ್ ನೀವು ಚನ್ನಾಗಿದ್ದೀರ ನಿಮಗೆ ಆಗಿಲ್ಲ ಎಂದು ಹೇಳಿದ ಶಂಕರ. ಆಯಿತು ನೋಡೋಣ ಏನಾಗಬಹುದೆಂದು ಎರಡು ತಟ್ಟೆಗಳನ್ನು ಕೊಡಿ ಎನ್ನುತ ಜೇಬಿನಿಂದ ೨ ರೂ ತೆಗೆದು ವೀಳ್ಯದೆಲೆ ತಗೋಬಾ ಎಂದು ರಮ್ಯಳಿಗೆ ಕೊಟ್ಟೆ. ಆಕಾಶನಿಗೆ ಬೀರುವಿನಲ್ಲಿರುವ ಪೊಟಾಷಿಯಂ ಪರ್ಮಾಂಗನೇಟ್ ತಗೋಬಾ, ರಮೇಶನಿಗೆ ಸ್ವಲ್ಪ ಇದ್ದಿಲು ತಗೋಬಾ ಎಂದೆ. ಸಾರ್ ಪ್ರಯೋಗನ ಅಂತ ಬಾಯಿಬಿಟ್ಟರು ಮಕ್ಕಳೆಲ್ಲರು. ಇಲ್ಲಪ್ಪ ರಾಜುವಿಗೆ ನಾನೊಮ್ಮೆ ಸೋಕು ತೆಗೆಯೋಣ ಅನಿಸ್ತಿದೆ ಅಂತ ಹೇಳುತ್ತ ಎರಡು ತಟ್ಟೆಗಳಿಗೂ ನೀರು ಹಾಕಿ ಗುರುತು ಹಾಕುವಷ್ಟರಲ್ಲಿ
ಎಲೆ, ಪೊಟಾಷಿಯಂ ಪರ್ಮಾಂಗನೇಟ್, ಇದ್ದಿಲು ಎಲ್ಲವನ್ನು ತಂದರು . ನನ್ನದು ೨೪ ಮಕ್ಕಳಿರುವ ಚಿಕ್ಕ ತರಗತಿಯಾದ ಕಾರಣ ಎಲ್ಲರನು ಕರೆದು ಟೇಬಲ್ ಸುತ್ತ ನಿಲ್ಲಿಸಿ ರಾಜುವನ್ನು ಮದ್ಯದಲಿ ನಿಲ್ಲಿಸಿಕೊಂಡೆ. ಸುಗುಣ ಮತ್ತು ಸಂಜಯ ಇಬ್ಬರು ಸೋಕು ತೆಗೆಯಲು ಮುಂದಾದರು , ಮೊದಲು ಬಣ್ಣದ ನೀರು ಸಿದ್ದಪಡಿಸಿಕೊಳ್ಳಲು ಸೂಚಿಸಿದೆ. ಇಬ್ಬರೂ ಒಂದೊಂದು ತಟ್ಟೆಗೆ ಒಂದು ಚಿಟಿಕೆ ಪೊಟಾಷಿಯಂ ಪರ್ಮಾಂಗನೇಟ್ ನೀರಿಗೆ ಹಾಕಿ ಕಲಕತೊಡಗಿದರು. ಉಳಿದವರೆಲ್ಲರು ಬೆರಗಿನಿಂದ ನೋಡತೊಡಗಿದರು. ಹೂ ,ಎಲೆ , ಹಾಕಿಸಿ ಇದ್ದಿಲನು ಸಂಜಯನಿಗೆ ಮಾತ್ರ ಕೊಟ್ಟು ಹಾಕಲು ತಿಳಿಸಿದೆ ಸಂಜಯನು ನೀರಿಗೆ ಇದ್ದಿಲನು ಹಾಕಿ ನಿಂತ. ಇದ್ದಿಲಿನ ಸುತ್ತಲು ಸಣ್ಣ ಸಣ್ಣ ನೀರಿನ ಗುಳ್ಳೆಗಳು ಮೇಲೇರತೊಡಗಿದವು ಮಕ್ಕಳು ಅದನ್ನು ಗಮನಿಸಿ , ನೋಡಿ ಸಾರ್ ನೀರು ಕುಡಿಯುತಿದೆ ಎಂದು ಕೂಗತೊಡಗಿದರು. ಸುಗುಣನ ತಟ್ಟೆಯಲಿ ಕುಡಿತಿಲ್ಲವಲ್ಲ ಅಂದೆ . ಸಾರ್ ಅಲ್ಲಿಗೆ ಇದ್ದಿಲು ಹಾಕಿಲ್ವಲ್ಲ ಎಂದ ಮನೋಜ್. ಮನೋಜ್ ಉತ್ತರಕೆ ಎಲ್ಲರೂ ದನಿಗೂಡಿಸಿದರು. ಹಾಗಾದರೆ ನೀರು ಕುಡಿದಿದ್ದು ಯಾರು ಅಂದೆ ಮಕ್ಕಳೆಲ್ಲರು ಸ್ತಬ್ದರಾಗಿ ಇದ್ದಿಲು ಎಂದರು. ನನಗೆ
ಅರ್ಧ ಪ್ರಯೋಗ ಯಶಸ್ವಿಯಾಗಿದೆ ಅನಿಸಿ ಇದ್ದಿಲು ನೀರನ್ನು ಏಕೆ ಕುಡಿಯಿತು? ಯೋಚಿಸಿ ಮದ್ಯಾಹ್ನದ ತರಗತಿಯಲಿ ಚರ್ಚಿಸೋಣ, ಎರಡು ತಟ್ಟೆಗಳನು ಮುಟ್ಟಬೇಡಿ ಎನ್ನುತ ಮುಂದಿನ ತರಗತಿಗೆ ಹೋದೆ.
ಮಕ್ಕಳೆಲ್ಲರು ಮದ್ಯಾಹ್ನದ ಅವಧಿಗಾಗಿ ಕಾದು ಕುಳಿತಿದ್ದರು. ನಾನು ಮದ್ಯಾಹ್ನ ತರಗತಿಯ ಒಳಗೆ ಕಾಲಿಟ್ಟೊಡನೆ ಸಾರ್ ಈಗ ಬಣ್ಣವು ಇಲ್ಲ ಎಂದು ಆಶ್ಚರ್ಯಕರವಾಗಿ ಹೇಳತೊಡಗಿದರು. ನಾನು ಮಕ್ಕಳೆ ಅದಾಗಿರಲಿ ಇದ್ದಿಲು ನೀರನ್ನು ಹೇಗೆ ಕುಡಿಯಿತು ಎಂದೆ. ಸುಗುಣ ಎದ್ದು ನಿಂತು ಗೊತ್ತಿಲ್ಲ ಸಾರ್ ನೀವೆ ಹೇಳಿ ಎಂದು ಕುಳಿತಳು. ಹೇಗೆ ತಿಳಿಸುವುದು ? ಅರೆಕ್ಷಣ ಯೋಚಿಸಿದೆ , ಮಕ್ಕಳೆ ನೀರಿನ ತೊಟ್ಟಿಯೊಳಗೆ ಖಾಲಿ ಬಿಂದಿಗೆ ಮುಳುಗಿಸಿದಾಗ ಏನಾಗುತ್ತದೇ ? ಏಕೆ ಹಾಗಾಯಿತು ಯೋಚಿಸಿ ಚರ್ಚಿಸಿ ಎಂದು ಸಮಯ ಕೊಟ್ಟೆ ಐದಾರು ನಿಮಿಷಗಳ ನಂತರ ಸಾರ್ ಬಿಂದಿಗೆಯನ್ನು ನೀರಿನಲ್ಲಿ ಮುಳುಗಿಸಿದಾಗ ಗುಳು ಗುಳು ಶಬ್ದದ ಜೊತೆಗೆ ಗಾಳಿಗುಳ್ಳೆಗಳು ಹೊರಬರುತ್ತವೆ ನೀರು ಬಿಂದಿಗೆಯ ಹೊಳಗೆ ಹೋಗುತ್ತದೆ ಎಂದ ಆಕಾಶ. ವೆರಿಗುಡ್ ಆಕಾಶ ಕುಳಿತುಕೋ ಎನ್ನುವಷ್ಟರಲ್ಲಿ ಸುಗುಣ ನಿಂತು ಸಾರ್ ಇದೇ ರೀತಿ ಇದ್ದಿಲಿನಲ್ಲೂ ಖಾಲಿ ಜಾಗವಿದ್ದು ಅದರಲಿ ಗಾಳಿ ತುಂಬಿರುತ್ತೆ ಇದ್ದಿಲನ್ನು ನೀರಿಗೆ ಹಾಕಿದಾಗ ಗಾಳಿ ಹೊರಬಂದು ನೀರು ಒಳಹೋಗುತ್ತದೇಯೇ? ಎಂದು ನನ್ನನ್ನೇ ಪ್ರಶ್ನಿಸಿದಳು. ಏನಮ್ಮ ಸುಗುಣ ಮತ್ತೊಮ್ಮೆ ಕೇಳು ನಿನ್ನ ಪ್ರಶ್ನೆಯನ್ನು ಎಲ್ಲರೂ ಕೇಳಿಸಿಕೊಳ್ಳಲಿ ಎಂದೆ . ಅವಳು ಮತ್ತೊಮ್ಮೆ ಅದೇ ಸಾಲುಗಳನ್ನು ಹೇಳಿ ಕುಳಿತಳು. ಮಕ್ಕಳ ಕಡೆ ನೋಡಿದೆ. ಸಂಜಯ ಶುರು ಮಾಡಿದ ಹೌದು ಸರ್ ಅದು ಹಾಗೆಯೇ ಎಂದ. ಬೇಷ್ ಮಕ್ಕಳೇ ನೋಡಿ ಇದ್ದಿಲಿನಲಿ ಗಾಳಿಯುಕ್ತ ಸುರಂದ್ರಗಳಿವೆ ಇದೇ ಕಾರಣದಿಂದ ಇದ್ದಿಲು ನೀರನ್ನು ಹೀರಿಕೊಳ್ಳುತ್ತದೆ. ಈ ಗುಣದಿಂದಾಗಿಯೇ ಇದ್ದಿಲಿನಿಂದ ಹಲವು ಉಪಯೋಗಗಳಿವೆ. ಇದನ್ನು ಇಂಗಾಲದ ಬಹುರೂಪಗಳು ಅನ್ನೋ ಪಾಟದಲ್ಲಿ ತಿಳಿಯೋಣ ಎನ್ನುತ ಅಂದಿನ ತರಗತಿ ಮುಗಿಸಿ ಹೊರಬಂದೆ.

—–+

ಚನ್ನಮಲ್ಲಸ್ವಾಮಿ.

ಸಂಜೆಯಾದ ಮೇಲೆ ಉಗುರು ಕತ್ತರಿಸಬಾರದು

ಇದಕ್ಕೆ ವೈಜ್ಞಾನಿಕ ಎಂದು ಕೊಡುವ ಕಾರಣ: ಮಸುಕು ಬೆಳಕಿನಲ್ಲಿ ಉಗುರು ಕತ್ತರಿಸುವಾಗ ಕಾಣದೆ ಗಾಯವಾಗಬಹುದು

ಈಗ ಎಲ್ಲ ಕಡೆಯೂ ಹಗಲಿಗಿಂತ ಹೆಚ್ಚು ಬೆಳಕು ಮನೆಯೊಳಗೆ ದೊರಕಿಸುವ ವಿದ್ಯುತ್ ದೀಪಗಳು ಇರುವಾಗ ಇದನ್ನು ವೈಜ್ಞಾನಿಕ ಎನ್ನುವುದು ಸರಿಯೇ?

ಹಾಗೆಯೇ ಶುಕ್ರವಾರ, ಮಂಗಳವಾರ ಕತ್ತರಿಸಬಾರದು ಎನ್ನುವವರೂ ಇದ್ದಾರೆ. ಏಕೆ? ಆ ದಿನಗಳಲ್ಲಿ ಉಗುರು ಬೆಳೆಯುವುದಿಲ್ಲವೇ? ವಾಸ್ತವವಾಗಿ ಪ್ರತಿ ದಿನವೂ ಉಗುರು ಬೆಳೆಯುತ್ತಲೇ ಇರುತ್ತದೆ. 

ಒಂದು ವೇಳೆ ಇಲಿಯೂ ನಮ್ಮಂತೆ ಯೋಚಿಸುತ್ತಿದ್ದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿದರೆ ನಗು ಬರುತ್ತದೆ. ಇಲಿಯ ಹಲ್ಲುಗಳು ಬಲು ವೇಗವಾಗಿ ಬೆಳೆಯುತ್ತವೆ. ಆ ಕಾರಣದಿಂದಾಗಿಯೇ ಅದು ಸದಾ ಏನನ್ನಾದರೂ ಕಚ್ಚುತ್ತಲೇ ಇರಬೇಕು. ಬೆಳೆಯುವ ಹಲ್ಲುಗಳನ್ನು ಸವೆಸಬೇಕು.

ಇಲಿಯೂ ನಮ್ಮ ಹಾಗೆ ವಾರ, ಸಮಯವನ್ನು ಲೆಕ್ಕ ಹಾಕಿ ಹಲ್ಲು ಸವೆಸಲು ಪ್ರಯತ್ನಿಸಿದ್ದರೆ ಅದರ ಬದುಕು ಖಂಡಿತ ಕಷ್ಟಕರವಾಗಿರುತ್ತಿತ್ತು.😀

ಬಸುರಿಯರು ಸೂರ್ಯಗ್ರಹಣದ ಸಮಯದಲ್ಲಿ ಹೊರಗೆ ಅಡ್ಡಾಡಬಾರದು

ಇದಕ್ಕೆ ವೈಜ್ಞಾನಿಕ ಎಂದು ಕೊಡುವ ಕಾರಣ ಹೀಗಿದೆ. ಆ ಸಮಯದಲ್ಲಿ ಸೂರ್ಯನಿಂದ ಬರುವ ಕಿರಣಗಳಲ್ಲಿ ಅಲ್ಟ್ರಾವಯಲೆಟ್ (ನೇರಳಾತೀತ) ಕಿರಣಗಳ ಪ್ರಮಾಣ ಹೆಚ್ಚಿರುವುದರಿಂದ ಅಪಾಯ ಎಂದು ಕಾರಣ ನೀಡಲಾಗುತ್ತದೆ.

ಇದು ನಿಜವೇ?

ಸೂರ್ಯ ಗ್ರ ಹಣದ ಸಮಯದಲ್ಲಿ ಚಂದ್ರ ಅಡ್ಡ ಬರುವುದರಿಂದ ನೆರಳಾಗುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯ ಅಂದರೆ ದೀಪಕ್ಕೆ ಅಡ್ಡವಾಗಿ ಕಾಗದವನ್ನು ಹಿಡಿದರೆ ಹೇಗೆ ಬೆಳಕಿನ ಜೊತೆಗೆ ದೀಪದಿಂದ ಬರುವ ಶಾಖವೂ ಕಡಿಮೆ ಆಗುತ್ತದೆಯೋ ಹಾಗೆಯೇ ನೇರಳಾತೀತ ಕಿರಣವೂ ಕಡಿಮೆ ಆಗುತ್ತದೆ.  ಹತ್ತು ಕಲ್ಲು ಇರುವ ಅಕ್ಕಿಯಲ್ಲಿ ಅಕ್ಕಿಯನ್ನೆಲ್ಲಾ ಆಯ್ದಾಗ ಉಳಿವ ಅದೇ ಹತ್ತು ಕಲ್ಲಿನ ಪ್ರಮಾಣ ಹೆಚ್ಚಾಗಿ ತೋರುತ್ತದಷ್ಟೆ. ಇಲ್ಲಿಯೂ ಹಾಗೆಯೇ ದೃಗ್ಗೋಚರ ಬೆಳಕು ಮಸುಕಾದಾಗ ಉಳಿದ ಕಿರಣಗಳು ಹೆಚ್ಚಾದಂತೆ ತೋರುತ್ತವೆಯೇ ಹೊರತು ಭೂಮಿಗೆ ಬಂದು ಬೀಳುವ ಕಿರಣಗಳ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆಗುವುದಿಲ್ಲ.

ಅಂದರೆ, ಈ ನಂಬಿಕೆ ಸತ್ಯವಾದರೆ ನಿತ್ಯದ ಬೆಳಗಿನಲ್ಲೂ ಬಸುರಿಯರಿಗೆ ನೇರಳಾತೀತ ಕಿರಣಗಳು ಬಡಿಯುತ್ತಲೇ ಇರುತ್ತವೆ. 

ಹಾಗಿದ್ದರೆ ನಿತ್ಯವೂ ಇಲ್ಲದ ಭಯ ಗ್ರಹಣದ ವೇಳೆ ಏಕೆ?

ಇದು ಮಾನವನ ಮನಸ್ಸು ಹಾಗೂ ತಿಳುವಳಿಕೆಗೆ ಸಂಬಂಧಿಸಿದ್ದು. ನಿತ್ಯವೂ ಹಗಲು ಬೆಳಗುವ ಸೂರ್ಯ ಹಗಲೇ ಕರಿಯಾಗಲು ಕಾರಣ ಗೊತ್ತಿಲ್ಲದಾಗ ಭಯ ಉಂಟಾಗುತ್ತದೆ. ಇದುವೇ ಗ್ರಹಣದ ಬಗ್ಗೆ ಇರುವ ಹಲವು ನಂಬಿಕೆಗಳಿಗೆ ಕಾರಣ ಇರಬಹುದು.

ಗ್ರಹಣದ ಸಮಯದಲ್ಲಿ ತಾಕುವುದಕ್ಕಿಂತಲೂ ಪ್ರಖರವಾದ ಶಕ್ತಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಿದಾಗ ದೇಹವಮ್ನು ತಾಕುತ್ತವೆ. ಬಸುರಿಯರು ಇದನ್ನು ನಿಲ್ಲಿಸಿದ್ದಾರೆಯೇ? ಆಗಿಲ್ಲದ ಭಯ ಗ್ರಹಣದ ವೇಳೆ ಏಕೆ? 

ಮುಸ್ಸಂಜೆ ಆದ ಮೇಲೆ ಕಸ ಗುಡಿಸಬಾರದೇ?

ಮುಸ್ಸಂಜೆ ಆದ ಮೇಲೆ ಕಸ ಗುಡಿಸಿದರೆ ದುರಾದೃಷ್ಟ ಬರುತ್ತದಂತೆ.

ಹೌದೇ? ಇದಕ್ಕೆ ಕೊಡುವ ಕಾರಣ: ರಾತ್ರಿ ಕತ್ತಲಲ್ಲಿ ಅಮೂಲ್ಯವಾದ ವಸ್ತುಗಳನ್ನು ಗುಡಿಸಿ ಬಿಸಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡಬಾರದಂತೆ.
ಈ ಮಾತು ಕೇಳಿದಾಗ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಏಳುತ್ತವೆ.

ನೆಲದಲ್ಲಿ ಇಡುವಂತಹ ಅಮೂಲ್ಯ ವಸ್ತುಗಳು ಯಾವುವು?

ಸಾಮಾನ್ಯವಾಗಿ ನೆಲದಲ್ಲಿ ಬಿದ್ದ ಮುತ್ತು, ನತ್ತು, ಗಾಜಿನ ಚೂರು ಇತ್ಯಾದಿ ಸಣ್ಣ ವಸ್ತುಗಳನ್ನು ಹುಡುಕಲು ಮತ್ತು ಹೆಕ್ಕಲು ಕಸಬರಿಕೆಯಿಂದ ಗುಡಿಸುವುದು ವಾಡಿಕೆ. ಹಾಗಿದ್ದ ಮೇಲೆ ಈ ತರ್ಕ ವಿಚಿತ್ರ ಅನಿಸುತ್ತದೆ. ಏನಾದರೂ ಬಿದ್ದಿದ್ದಲ್ಲಿ ಅದನ್ನು ಒಂದೆಡೆ ಗುಡಿಸಿಟ್ಟರೆ ಹುಡುಕುವುದು ಸರಾಗ ಅಲ್ಲವೇ?

ಮೂರನೆಯದಾಗಿ ಈ ನಂಬಿಕೆ ಎಲ್ಲ ಕಡೆಯೂ ಇದೆಯೋ? ಸಾಂಪ್ರದಾಯಿಕವಾಗಿ ಅಟ್ಟಣಿಗೆಗಳ ಮೇಲೆ ವಾಸವಿರುವವರೂ ಸಂಜೆ ಆದ ಮೇಲೆ ಗುಡಿಸಬಾರದು ಎನ್ನುವರೋ?

ಅಂದ ಹಾಗೆ ಗುಡಿಸುವುದರ ಬಗ್ಗೆ ಇನ್ನೂ ಬೇರೆ ನಂಬಿಕೆಗಳು ಇವೆಯೋ? ಯಾರಿಗಾದರೂ ಗೊತ್ತಿದ್ದಲ್ಲಿ ಕಮೆಂಟು ಹಾಕಿ.

ಕೆಲವೊಮ್ಮೆ ಯಾವುದೋ ಸಂದರ್ಭದಲ್ಲಿ ತೊಡಗಿದ ಆಚರಣೆಯನ್ನು ಎಲ್ಲರೂ ಅವಶ್ಯಕವಿಲ್ಲದಿದ್ದರೂ ಅನುಕರಿಸುವುದೂ ಉಂಟು.

ಕಂಪ್ಯೂಟರಿಗೂ ಆಯುಧಪೂಜೆಯಲ್ಲಿ ಪೂಜಿಸುವುದು ಇಂತಹ ಅನುಕರಣಾ ವಿಧಿಗಳಿಗೆ ಉದಾಹರಣೆ.

ಆಯುಧಗಳಿರುವ ಎಲ್ಲರೂ ಆಯುಧಪೂಜೆಯನ್ನು ಆಚರಿಸುವುದಿಲ್ಲವಾದ್ದರಿಂದ ಇದು ವೈಜ್ಞಾನಿಕ ಕಾರಣಗಳಿಗಾಗಿ ಅಲ್ಲ ಎನ್ನುವುದು ಸ್ಪಷ್ಟ. 

ಬೆಕ್ಕು ದಾರಿಗಡ್ಡ ಬಂದಾಗ

ಈ ಚಿತ್ರವನ್ನು ಕಂಡಾಗ ಎಲ್ಲೋ ಓದಿದ ಒಂದು ಕಥೆ ನೆನಪಿಗೆ ಬಂತು. ಹಾಗೆ ಒಂದೆರಡು ಪ್ರಶ್ನೆಗಳೂ


ಗೆಳೆಯರಿಬ್ಬರು ಪ್ರವಾಸ ಹೊರಟಿದ್ದರು.ಒಬ್ಬ ಮಹಾ ಭಕ್ತ. ಮತ್ತೊಬ್ಬ ನಾಸ್ತಿಕ. ಹಾದಿಯಲ್ಲಿ ಒಂದು ಬೆಕ್ಕು ಅವರಿಗೆ ಅಡ್ಡ ಬಂತು. ಭಕ್ತನಿಗೋ ಆತಂಕ. ಇದು ಕೆಟ್ಟ ಶಕುನ ಎಂದ ಆತ ಮುಂದೆ ಹೋಗದೆ ಅಲ್ಲೇ ನಿಂತ. ಅವನಿಗೆ ಸಮಾಧಾನ ಮಾಡುವುದಕ್ಕೆ ನಾಸ್ತಿಕನೇ ಮುಂದೆ ಹೊಇಗಿ, ಬೆಕ್ಕು ದಾಟಿದ ಹಾದಿಯನ್ನು ಮೀರಿ ಮುಂದೆ ನಡೆದ. ಬೆಕ್ಕು ಎಡದಿಂದ ಬಲಕ್ಕೆ ಹಾಯ್ದರೆ ಮಾತ್ರ ಅಪಶಕುನ ಎಂದ. ಅದಕ್ಕೆ ಒಪ್ಪಿದ ಭಕ್ತ ಪ್ರಯಾಣ ಮುಂದುವರೆಸಿದ.

ಇನ್ನಷ್ಟು ದೂರ ಹೋಗಿರಬಹುದು. ಭಕ್ತ ಕಲ್ಲೊಂದನ್ನು ಎಡವಿ ಬಿದ್ದ. ಕಾಲಿಗೆ ಪೆಟ್ಟಾಗಿ ರಕ್ತ ಸುರಿಯಲು ಆರಂಭಿಸಿತು. ಅಲ್ಲೇ ಕುಳಿತು ಅದಕ್ಕೊಂದು ಪಟ್ಟಿ ಕಟ್ಟಿದ. ಬೆಕ್ಕು ಅಡ್ಡ ಬಂದಿದ್ದರಿಂದಲೇ ಹೀಗಾಗಿರಬೇಕು ಎಂದು ಆತಂಕಿಸಿದ. 


ನಾಸ್ತಿಕ ನಕ್ಕು, ಅದೇ ಹಾದಿಯಲ್ಲಿ ಬರುವ ಇತರರಿಗೆ ತೊಂದರೆಯಾಗದಿರಲಿ ಎಂದು ಹಾದಿಗೆ ಅಡ್ಡವಾಗಿದ್ದ ಕಲ್ಲನ್ನು ಕಿತ್ತೆಸೆದ. ಕಲ್ಲು ಕೈಗೆ ಬಂದ ಮೇಲೆ ನೋಡಿದರೆ ಹೊಳೆಯುತ್ತಿತ್ತು. ಅದೊಂದು ಅಮೂಲ್ಯವಾದ ರತ್ನ. ಖುಷಿಯಿಂದ ಚೀಲಕ್ಕೆ ಹಾಕಿಕೊಂಡ.

ಹೀಗೇ ಅವರ ಪಯಣ ಮುಂದುವರೆಯಿತು. ಭಕ್ತನಿಗೋ ಹೊಟ್ಟೆಯುರಿ. ಬೆಕ್ಕು ಅಡ್ಡ ಬಂದಿದ್ದರೂ ನಾಸ್ತಿಕನಿಗೆ ವಜ್ರ ಸಿಕ್ಕಿತಲ್ಲ. ತನಗೆ ಕಾಲಿಗೆ ಗಾಯವಷ್ಟೆ ಸಿಕ್ಕಿತಲ್ಲ. ಹೀಗೆಂದು ಹೊಟ್ಟೆ ಉರಿದುಕೊಂಡ. ಎಲ್ಲಿಯಾದರೂ ಸಮಯ ಸಿಕ್ಕರೆ ಅದನ್ನುಬಕದ್ದು ತನ್ನದಾಗಿಸಿಕೊಳ್ಳಬೇಕು ಎಂದೂ ಯೋಚಿಸಿದ.


ಸ್ವಲ್ಪ ದೂರ ಕಳೆದ ಮೇಲೆ ಸುಂಕದ ಕಟ್ಟೆ ಬಂತು. ಅಲ್ಲಿದ್ದ ಅಧಿಕಾರಿಗಳು ಇಬ್ಬರ ಚೀಲವನ್ನೂ ಪರಿಶೀಲಿಸಿದರು. ನಾಸ್ತಿಕನ ಚೀಲದಲ್ಲಿದ್ದ ವಜ್ರವನ್ನು ನೋಡಿ ಕಳ್ಳ ಎಂದು ಬಂಧಿಸಿದರು. ಬೆಳಗ್ಗೆ ಅದೇ ಹಾದಿಯಲ್ಲಿ ಮೆರವಣಿಗೆ ಹೋದ ರಾಜನ ಕಿರೀಟದಿಂದ ರತ್ನ  ಕಳೆದು ಹೋಗಿತ್ತಂತೆ. 


ಎಷ್ಟು ಹೇಳಿದರೂ ಕೇಳದೆ ನಾಸ್ತಿಕನನ್ನು ಸೆರೆಮಬೆಗೆ ದೂಡಿದರು. ಭಕ್ತ ಆಗ ನಿಟ್ಟುಸಿರು ಬಿಟ್ಟು ಯಾರ ಮುಖ ನೋಡಿದ್ದೆನೋ ಬದುಕಿದೆ ಎಂದ. ಬೆಕ್ಕು ಅಡ್ಡಿಯಾಗಿದ್ದು ಮರೆತೇ ಹೋಗಿತ್ತು.

—–

ಆತಂಕ ಮನಸ್ಸಿನ ಸ್ಥಿತಿ. ಬೆಕ್ಕಿನ ಕಣ್ಣು ಭಯಾನಕವೇನೋ ನಿಜ. ಅದೇ ರೀತಿಯ ಕಣ್ಣಿರುವ ಹುಲಿಯೂ ಅಪಶಕುನವೋ?  ಈಚಿನ ದಿನಗಳಲ್ಲಿ ಹುಲಿ ದಾರಿಗೆ ಅಡ್ಡ ಬರುವುದಿಲ್ಲ ನಿಜ. ಆದರೆ ಈ ನಂಬಿಕೆ ಆರಂಭವಾದ ದಿನಗಳಲ್ಲಿ ಇದ್ದಿರಬಹುದು ಎಂದಿರಾ? 


ಹಾಗಿದ್ದರೆ ಸಾಕಿದ ಬೆಕ್ಕು ಅಪಶಕುನವಲ್ಲವೇ? ಏಕೆಂದರೆ ಅದನ್ನು ಕಂಡು ನಾವು ಭಯಪಡುವುದಿಲ್ಲವಲ್ಲ!


ಎಲ್ಲ ನಂಬಿಕೆಗಳಿಗೂ ವೈಜ್ಞಾನಿಕ ಕಾರಣಗಳಿರಬೇಕಿಲ್ಲ. ಭಯ, ಅನುಕರಣೆಯೂ ಕೆಲವು ಆಚರಣೆಗಳಿಗೆ ಕಾರಣ.

ಕ್ರಿಪ್ಟಾನು

ವಿಲಿಯಂ ರಾಮ್ಸೇ ನಿನ್ನ ಶೋಧಕ

ಅದಕಾಗಿಯೇ ಪಡೆದ ನೋಬೆಲ್ ಪದಕ

ವಾಸನೆ, ಬಣ್ಣ, ರುಚಿ ಇಲ್ಲದ ವಿರಾಗಿ

ಮೀಟರು ವ್ಯಾಖ್ಯಾನಿಸಲು ಆಧಾರವಾದೆ

ದಶಕಗಳಿಗೂ ಮಿಗಿಲಾಗಿ

ಶರವೇಗದ ಛಾಯಾಗ್ರಹಣಕೆ ಬಲು ಉಪಯೋಗಿ.

ಚನ್ನಮಲ್ಲಸ್ವಾಮಿ

ಹಲ್ಲಿ ಮೈಮೇಲೆ ಬಿದ್ದರೆ ದುರಾದೃಷ್ಟವೇ?

ಇಗೋ. ಹಲ್ಲಿ ಮೈಯಲ್ಲಿ ವಿಷ ಪದಾರ್ಥಗಳು ಇರುವುದರಿಂದ ಹಾಗೆ ಹೇಳಲಾಗುತ್ತದೆ ಎಂದು ಈ ನಂಬಿಕೆಗೆ ಸಮಜಾಯಿಷಿ ನೀಡಲಾಗುತ್ತದೆ.

ಇದು ನಿಜವೇ ಆದರೆ ಸೊಳ್ಳೆ, ಜಿರಲೆ, ಜೇಡಗಳಂತಹ ಜೀವಿಗಳು ಮೈ ಮೇಲೆ ಬಿದ್ದಾಗಲೂ ದುರಾದೃಷ್ಟ ಎಂದು ಹಳಿಯಬೇಕಿತ್ತು? ಹಾಗೇಕಿಲ್ಲ?

ವಾಸ್ತವವಾಗಿ ಮನೆಯ ಹಲ್ಲಿ ವಿಷಕಾರಿಯೇ ಅಲ್ಲ. ಹಾಗಿದ್ದ ಮೇಲೆ ಈ ನಂಬಿಕೆ ತಪ್ಪಲ್ಲವೇ?

ಇದು ಹಲ್ಲಿಯಂತಹ ಜೀವಿಗಳ ಬಗ್ಗೆ ಅರಿವಿಗಿಂತ ಭಯ ಹೆಚ್ಚಾಗಿರುವುದರಿಂದ ಹುಟ್ಟಿದ ಮೌಢ್ಯವಷ್ಟೆ. 

ಎಲ್ಲ ಆಚರಣೆಗಳಿಗೂ, ಎಲ್ಲ ನಂಬಿಕೆಗಳಿಗೂ ಕಾರಣ, ವೈಜ್ಞಾನಿಕ ಬುನಾದಿ ಇರಬೇಕಿಲ್ಲ.

ಕೊಳ್ಳೇಗಾಲ ಶರ್ಮ