ಒಟ್ಟೊ ಫ್ರಿಶ್ ಮೆಯೆರ್ಹಾವ್

ಒಟ್ಟೊ ಫ್ರಿಟ್ಜ್ ಮೆಯೆರ್ಹಾವ್
(12/4/1884-6/10/1951)

image

ಜರ್ಮನಿಯ ಜೀವರಸಾಯನಶಾಸ್ತ್ರಜ್ಞ.  ಸ್ನಾಯುಗಳಲ್ಲಿನ ಚಯಾಪಚಯ ರಾಸಾಯನಿಕ ಕ್ರಿಯೆಗಳ ಬಗ್ಗೆ ಸಂಶೋಧನೆಗಾಗಿ  1922 ರಲ್ಲಿ ಶರೀರ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಆರ್ಚಿಬಾಲ್ಡ್ ವಿ. ಹಿಲ್ ಜೊತೆಗೆ ಹಂಚಿಕೊಂಡರು.  ಮೆಯೆರವ್  1940 ರಲ್ಲಿ ಅಮೆರಿಕಕ್ಕೆ ವಲಸೆ ಹೋದರು.  ಸ್ನಾಯುಗಳಲ್ಲಿ ಗ್ಲೈಕೋಜನ್ ವಿಭಜನೆಯಾಗಿ ಲ್ಯಾಕ್ಟಿಕ್ ಉತ್ಪಾದನೆಯಾಗಲು ಆಮ್ಲಜನಕ ಇರಬೇಕಿಲ್ಲವೆಂದು ಪ್ರಮಾಣಿಸಿದರು. ಹೀಗೆ ಸ್ನಾಯುವಿನಲ್ಲಿ ಸಂಗ್ರಹವಾದ ಲ್ಯಾಕ್ಟಿಕ್ ಆಮ್ಲವನ್ನು  ಆಮ್ಲಜನಕವನ್ನು ಊಡಿಸುವ ಮೂಲಕ ಮರಳಿ ಗ್ಲೈಕೋಜನ್ ಆಗಿ ಪರಿವತ೯ನೆ ಮಾಡಿ ತೋರಿಸಿದರು. ಒಟ್ಟೊ ಫ್ರಿಟ್ಜ್ ಮೆಯೆರವ್ ರವರು ಅನುಸರಿಸಿದ ಕ್ರಮವನ್ನು ಮುಂದುವರೆಸಿದ ಗುಸ್ಟಾವ್ ಎಮ್ಡನ್, ಹಾಗೂ ಕಾಲ್೯ ಮತ್ತು ಗೆರ್ಟಿ ಕೋರಿ ದಂಪತಿ ಗ್ಲೈಕೊಜೆನ್ ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತನೆಯಾಗುವ ವಿವಿಧ ಹಂತಗಳನ್ನು ಇನ್ನಷ್ಟು ವಿವರವಾಗಿ ತಿಳಿಸಿದರು.
——-
ಚಿತ್ರವಿವರ: ಯು.ಜಿ.ಮೋಹನ್ ಆರಾಧ್ಯ

Advertisements

ಪರ್ಸಿ ಎಲ್. ಜೂಲಿಯನ್

ಪೆರ್ಸಿ. ಎಲ್. ಜೂಲಿಯನ್ (11/4/1899-19/4/1975)

image

ಆಫ್ರಿಕಾ ಮೂಲದ ಅಮೆರಿಕನ್ ರಸಾಯನ ಶಾಸ್ತ್ರಜ್ಞ. ಅವರ 100 ಪೇಟೆಂಟ್ ಗಳಲ್ಲಿ ಮುಖ್ಯವಾದವುಗಳೆಂದರೆ,  ಕೋಟಿ೯ಸೊನ್,ಹಾಮೋ೯ನ್ ಗಳು ಮತ್ತು ಇತರ ಸೋಯಬಿನ್ ಉತ್ಪನ್ನಗಳ ಸಂಶ್ಲೇಷಣೆಯ ವಿಧಾನಗಳು .ಅವರು ಸಸ್ಯಗಳಿಂದ ಕೆಲವು ಸರಳ ಸಂಯುಕ್ತಗಳನ್ನು  ಬೇರ್ಪಡಿಸಿ, ಇವುಗಳು ವಿಟಮಿನ್ ಮತ್ತು ಹಾಮೋ೯ನ್ ಮುಂತಾದ ಜೀವಕ್ರಿಯೆಗೆ ಅವಶ್ಯಕವಾದ ರಾಸಾಯನಿಕಗಳಾಗಿ ಹೇಗೆ ನೈಸರ್ಗಿಕವಾಗಿ ಪರಿವರ್ತನೆಯಾಗುತ್ತವೆಂಬುದನ್ನು ಪತ್ತೆ ಹಚ್ಚಿದರು. ಆ ನಂತರ ಕೃತಕವಾಗಿ ಈ ಸಂಯುಕ್ತಗಳನ್ನು ತಯಾರಿಸಲು ಪ್ರಯತ್ನಿಸಿದರು. ಪೆರ್ಸಿ. ಎಲ್. ಜೂಲಿಯನ್ ರವರು  ಮೊದಲಿಗೆ ಫಿಸೋಸ್ಟಿಗ್ಮೈನ್, ಗ್ಲಾಕೋಮಾ (ಕಣ್ಣಿನ ಖಾಯಿಲೆ) ಚಿಕಿತ್ಸೆಗೆ ಬಳಸುವ ಫೈಸೊಸ್ಟಿಗ್ಮೈನ್  ಔಷಧವನ್ನು ಸಂಶ್ಲೇಷಿಸಿದರು.  ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ನೌಕಾಪಡೆಗಳು ಬಳಸಿದ ಅಗ್ನಿಶಾಮಕ ನೊರೆಯನ್ನು ಇವರು ಸೋಯಾದಿಂದ ಸಂಶ್ಲೇಷಿಸಿದ ಪ್ರೋಟೀನುಗಳ ನೆರವಿನಿಂದ ರೂಪಿಸಲಾಯಿತು.. ಇವರ ಸಂಶೋಧನೆಯಿಂದಾಗಿ  ಪ್ರೊಜೆಸ್ಟರಾನ್ (ಸ್ತ್ರೀ ಹಾಮೋ೯ನ್), ಟೆಸ್ಟೋಸ್ಟೆರಾನ್(ಪುರುಷ ಹಾಮೋ೯ನ್) ಮತ್ತು ಕೋಟಿ೯ಸೊನ್  (ಔಷಧ) ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬಹುದಾಯಿತು. ದುರಂತವೆಂದರೆ 1950 ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇವರ ಮನೆಯು ಸುಟ್ಟು ಹೋಗಿತ್ತು.
—–
ಚಿತ್ರ ಲೇಖನ: ಮೋಹನ್ ಆರಾಧ್ಯ

ಮೆಲ್ವಿಸ್ ಎಲಿಸ್ ಕೆಲ್ವಿನ್

ಮೆಲ್ವಿನ್ ಎಲಿಸ್ ಕೆಲ್ವಿನ್ (8/4/1911 ರಿಂದ 8/1/1997)

image

ಅಮೆರಿಕದ ಜೀವ ರಸಾಯನ ವಿಜ್ಞಾನಿ. ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಯ ಬಗ್ಗೆ ಅಧ್ಯಯನ ನಡೆಸಿ ಹೆಚ್ಚಿನ  ಜ್ಞಾನ ಒದಗಿಸಿದ್ದಕ್ಕೆ ಅವರಿಗೆ 1961ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಯು ಲಭಿಸಿತು.  ‘ಕೆಲ್ವಿನ್ ಚಕ್’ ಎಂದು ಅವರ ಹೆಸರನ್ನೇ ಇಟ್ಟಿರುವ ದ್ಯುತಿ ಸಂಶ್ಲೇಷಣೆಯ ಪ್ರಕ್ರಿಯೆಯಲ್ಲಿ ಹಸಿರು ಸಸ್ಯಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಶರ್ಕರವಾಗಿ ಪರಿವರ್ತಿಸುವ ಹಾಗೂ ರಾತ್ರಿಯಿಡೀ ನಡೆಯುವ ‘ಇರುಳು ಪ್ರಕ್ರಿಯೆ’ ಯನ್ನು ಇವರು ವಿವರಿಸಿದರು.  ಕೆಲ್ವಿನ್ ಮತ್ತು ಅವರ ತಂಡವು ಕಾಬ೯ನ್ – 14 ಬಳಸಿ ದ್ಯುತಿ ಸಂಶ್ಲೇಷಣೆಯ ಕ್ರಿಯೆಯಲ್ಲಿ ಇಂಗಾಲದ ಅಣುವಿನ ಜಾಡನ್ನು  ಗುರುತಿಸಿದರು.
ಸಸ್ಯಗಳಲ್ಲಿ ನಡೆಯುವದ್ಯುತಿ ಸ೦ಶ್ಲೇಷಣಾ ಕ್ರಿಯೆಯಲ್ಲಿ ವಾತಾವರಣದ ಇಂಗಾಲದ ಡೈ ಆಕ್ಸೈಡ್ ಅನಿಲವು ಹೀರಿಕೆಯಾಗಿ ನ೦ತರ ಕಾಬೋ೯ಹೈಡ್ರೇಟ್ಸ್ ಮತ್ತು ಸಾವಯವ ಸಂಯುಕ್ತಗಳಾಗಿ ಸ೦ಶ್ಲೇಷಣೆಯಾಗುವವರೆಗೆ ಇಂಗಾಲದ ಪರಮಾಣುವು ಸಸ್ಯದ ಮೂಲಕ ಚಲಿಸುವ ಸಂಪೂರ್ಣ ಮಾರ್ಗವನ್ನು ಹೀಗೆ ಗುರುತಿಸಿದರು. ಸೂರ್ಯನ ಬೆಳಕಿನ ಪರಿಣಾಮವು ಸಸ್ಯಗಳ ಕ್ಲೋರೋಫಿಲ್ ಅಣುವಿನ ಮೇಲೆ ಮಾತ್ರ,ಇಂಗಾಲದ ಡೈ ಆಕ್ಸೈಡ್ ಅನಿಲದ ಮೇಲಲ್ಲ ಎಂದು ಅವರು ಸ್ಪಷ್ಟಪಡಿಸಿದರು.
——
ಚಿತ್ರ ಲೇಖನ: ಮೋಹನ್ ಆರಾಧ್ಯ

ಫ್ರಾನ್ಸಿಸ್ಕೊ ಸೆಲ್ಮಿ

image

ಫ್ರಾನ್ಸಿಸ್ಕೊ ಸೆಲ್ಮಿ ಇಟಲಿಯ ರಸಾಯನ ಹಾಗೂ ವಿಷಶಾಸ್ತ್ರದ ವಿಜ್ಞಾನಿ ಮತ್ತು ಕೊಲಾಯಿಡ್ (ಕಲನ) ರಸಾಯನ ಶಾಸ್ತ್ರದ ಬೆಳವಣಿಗೆಗೆ ಕಾರಣರಾದ ಮೂಲ  ವಿಜ್ಞಾನಿ ಗಳಲ್ಲಿ  ಒಬ್ಬರು.  ಸಂಯುಕ್ತಗಳನ್ನು  ವಾಸನೆಯಿ೦ದ ಸುಲಭವಾಗಿ ಪತ್ತೆ ಮಾಡಬಹುದಾದ ಕೆಲವು ಸಾರಜನಕ ಸಂಯುಕ್ತಗಳನ್ನು ಸೂಚಿಸಲು ಟೊಮೇನ್ ಎಂಬ ಪದವನ್ನು ಇವರು ಸೂಚಿಸಿದರು. ಟೋಮಾ ಎಂದರೆ ಗ್ರೀಕ್ ಭಾಷೆಯಲ್ಲಿ ಶವ, ಹೆಣ ಎಂದರ್ಥ.  ಟೊಮೇನ್ ಗಳು ಪ್ರೋಟೀನ್ ಕ್ಷಯಿಸಿದ್ದರಿಂದ ಉಂಟಾದ ಉತ್ಪನ್ನಗಳು. ನಿರ್ವಿವಾದವಾಗಿ ಇವು ಕೆಟ್ಟ ವಾಸನೆಯ ಆಲ್ಕಲಾಯಿಡ್ಗಳು. ಈ ಕಾರಣದಿಂದಲೆ ಸೆಲ್ಮಿ ವಿಷಪೂರಿತ ಆಹಾರಕ್ಕೆ ಟೊಮೇನ್ ನ೦ತಹ ಆಲ್ಕಲಾಯಿಡ್ ಗಳೇ ಕಾರಣ ಎಂದು ತೀರ್ಮಾನಿಸಿದ್ದರು. ಈಗಲೂ ಕೆಲವೊಮ್ಮೆ
ಟೊಮೇನ್ ಪಾಯ್ಸನಿಂಗ್ ಎಂದು ಹೇಳುವುದುಂಟು.  ಟೊಮೇನ್ ಗಳು ನೇರವಾಗಿ ವಿಷಪೂರಿತ ಆಹಾರಕ್ಕೆ ಕಾರಣವಲ್ಲ. ಆದರೆ ಅವುಗಳ ಉತ್ಪತ್ತಿಗೆ ಕಾರಣವಾದ ಸೂಕ್ಷ್ಮಜೀವಿಗಳು ಮತ್ತು ಈ ಜೀವಿಗಳು ಸ್ರವಿಸಿದ ವಿಷವಸ್ತು (ಟಾಕ್ಸಿನ್) ಗಳೇ ಕಾರಣ ಎನ್ನುವುದು ಈಗ ತಿಳಿದಿದೆ.
——
ಚಿತ್ರ-ಲೇಖನ: ಮೋಹನ್ ಆರಾಧ್ಯ

ಜೇಮ್ಸ್ ವ್ಯಾಟ್ಸನ್

image

ಜೇಮ್ಸ ವಾಟ್ಸನ್ ರವರು
ಅಮೆರಿಕದ ಸುಪ್ರಸಿದ್ಧ ಜೀವ ರಸಾಯನ ವಿಜ್ಞಾನಿ.  ನೂಕ್ಲಿಯಿಕ್ ಆಮ್ಲಗಳ ಅಣುವಿನ ರಚನೆ ಮತ್ತು ಜೀವಕೋಶಗಳಲ್ಲಿ ಅನುವಂಶೀಯ ಮಾಹಿತಿಗಳ ವಗಾ೯ವಣೆಯಲ್ಲಿ ನೂಕ್ಲಿಯಿಕ್ ಆಮ್ಲಗಳ ಮಹತ್ವ ಕುರಿತ ಆವಿಷ್ಕಾರಕ್ಕಾಗಿ ೧೯೬೨ ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು..
 
ಜೀವಕೋಶಗಳಲ್ಲಿರುವ ಡಿ. ಎನ್. ಎ. (ಡಿಯಾಕ್ಸಿ ರೈಬೊ ನ್ಯೂಕ್ಲಿಕ್ ಆಮ್ಲ) ಯು ಅನುವಂಶೀಯತೆಯನ್ನು ನಿಯಂತ್ರಿಸುತ್ತದೆಂದು ತಿಳಿಸಿದರು.
ವಾಟ್ಸನ್ ರವರು ಕ್ರಿಕ್ ಅವರ ಜೊತೆಗೂಡಿ ನಡೆಸಿದ ಅಧ್ಯಯನಗಳು ಡಿಎನ್ ಎ ರಚನೆಯನ್ನು ವಿವರಿಸಿದುವು.  ಡಬಲ್ ಹೆಲಿಕ್ಸ್ ಎಂದು ಪ್ರಸಿದ್ಧವಾಗಿರುವ ಈ ರಚನೆಯ ವಿವರಗಳು ೨ನೇ ಏಪ್ರಿಲ್ ೧೯೫೩ ರಲ್ಲಿ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದುವು. ಇದನ್ನು ೨೦ ನೇ ಶತಮಾನದ ಅತಿ ಮಹತ್ವದ ಆವಿಷ್ಕಾರವೆಂದು ನಿಧ೯ರಿಸಲಾಗಿದೆ.
— (ಚಿತ್ರ, ಬರಹ)ಯು.ಜಿ.ಮೋಹನ್ ಆರಾಧ್ಯ

ಇವಾರ್ ಗೀವರ್

ಇವಾರ್ ಗೀವರ್

image

ನಾರ್ವೆಯಲ್ಲಿ ಜನಿಸಿದ ಅಮೆರಿಕನ್ ಭೌತವಿಜ್ಞಾನಿ. ಅತಿವಾಹಕ (ಸೂಪರ್ ಕಂಡಕ್ಟರ್) ಗಳಲ್ಲಿ ಟನಲಿಂಗ್ ಎಂದು ಹೆಸರಿಸಿದ ವಿದ್ಯುತ್ ಪರಿಣಾಮವನ್ನು ಕುರಿತಾಗಿ ಈತ ಪ್ರಯೋಗಗಳನ್ನು ನಡೆಸಿದ್ದ. ಲಿಯೊ ಇಸಾಕಿ ಹಾಗೂ ಬ್ರಯಾನ್ ಜೋಸೆಫ್ಸನ್ ಜೊತೆಗೆ ಸಾಲಿಡ್ ಸ್ಟೇಟ್ ಫಿಸಿಕ್ಸ್ ಕ್ಷೇತ್ರದಲ್ಲಿನ ಸಂಶೋಧನೆಗಳಿಗಾಗಿ 1973ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ.
1960ರಲ್ಲಿ ಗೀವರ್ ಅತಿವಾಹಕವಸ್ತುವಿನ ಎರಡು ತೆಳು ಹಾಳೆಗಳು ಅಥವಾ ಒಂದೆಡೆ ಅತಿವಾಹಕ ಮತ್ತೊಂದೆಡೆ ಸಾಮಾನ್ಯ ವಾಹಕ ಸಾಮರ್ಥ್ಯದ ವಸ್ತುವಿನ ತೆಳುಹಾಳೆಗಳ ನಡುವೆ ಅವಾಹಕ ಆಕ್ಸೈಡು ಪದರವಿದ್ದಾಗ ಅದರ ಮೂಲಕವೂ ಇಲೆಕ್ಟ್ರಾನುಗಳು ನುಸುಳುತ್ತವೆಂದು ಪ್ರಯೋಗಗಳ (1960) ಮೂಲಕ ನಿರೂಪಿಸಿದ. ಇದು ಆ ಹಿಂದೆ ಜಾನ್ ಬಾರ್ಡೀನ್ (1972 ನೊಬೆಲ್ ಪ್ರಶಸ್ತಿ) ಊಹಿಸಿದ್ದಂತೆ ಇಲೆಕ್ಟ್ರಾನ್ ಬ್ಯಾಂಡುಗಳ ನಡುವೆ ತುಸು ಕಂದರವಿದೆಯೆಂಬುದನ್ನು ನಿರೂಪಿಸಿತು. ಅನಂತರ ಗೀವರ್ ಇದನ್ನು ಅತಿವಾಹಕಗಳ ಗುಣಗಳನ್ನು ಕರಾರುವಾಕ್ಕಾಗಿ ಅಧ್ಯಯನ ಮಾಡಬಲ್ಲ ರೋಹಿತದರ್ಶಕ ತಂತ್ರವಾಗಿಯು ಅಭಿವೃದ್ಧಿಪಡಿಸಿದ.
—–
ರೇಖಾಚಿತ್ರ: ಮೋಹನ್ ಆರಾಧ್ಯ

ಕ್ಯಾಥರೀನ್ ಎಸಾವ್

ಕ್ಯಾಥರೀನ್ ಎಸಾವ್.

image

ಸಸ್ಯಾಂಗಗಳ ರಚನೆ ಹಾಗೂ ಕಾರ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಬುನಾದಿ ಎನಿಸುವಂತಹ ಸಂಶೋಧನೆ ಮಾಡಿದ ರಶಿಯಾ ಮೂಲದ ಅಮೆರಿಕನ್ ಸಸ್ಯವಿಜ್ಞಾನಿ. ಸಸ್ಯಗಳ ಅಂಗಾಂಶಗಳ ರಚನೆ ಹಾಗೂ ಅದರ ಮೇಲೆ ಸಸ್ಯವೈರಸ್ ಗಳ ಪ್ರಭಾವದ ಬಗ್ಗೆ ನಡೆಸಿದ ಸಂಶೋಧನೆಗಳಿಗಾಗಿ ಈಕೆ ಪ್ರಸಿದ್ಧಳು. ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ನಾಳಗಳ (ಫ್ಲೋಯೆಮ್) ಬೆಳೆವಣಿಗೆ ಹಾಗೂ ಇವುಗಳ ರಚನೆಯ ಮೇಲೆ ವೈರಸ್‌ಗಳ ಪ್ರಭಾವ  ಈಕೆಯ ಅಧ್ಯಯನದ ಪ್ರಧಾನ ಅಂಶಗಳು. ಈ ಸಂಶೋಧನೆಗಳು ವೈರಸ್ ಸೋಂಕಿನ ಹಾಗೂ ಸೋಂಕಿನ ಫಲವಾಗಿ ಜನಿಸಿದ ತೊಂದರೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಈ ಸಂಶೋಧನೆಯ ಫಲವಾಗಿ ವೈರಸ್ ಸೋಂಕಿದ ನಿರ್ದಿಷ್ಟ ಅಂಗಾಂಶದ ಅಧ್ಯಯನ ಮಾಡಲು ನೆರವಾಯಿತು. ಇದಲ್ಲದೆ ಸಸ್ಯಗಳ ವಿವಿಧ ಅಂಗಗಳು, ಅದರಲ್ಲೂ ವಿಶೇಷವಾಗಿ ಸಸ್ಯಗಳ ಎಲ್ಲ ಅಂಗಗಳಿಗೂ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವ ಶೋಧಕ ಕೊಳವೆಗಳ ಬೆಳೆವಣಿಗೆಯ ವಿವಿಧ ಹಂತಗಳನ್ನು ಸ್ಪಷ್ಟೀಕರಿಸಿದಳು. ಆಕೆ ಬರೆದ ಪ್ಲಾಂಟ್ ಅನಾಟಮಿ ( ಸಸ್ಯ ಅಂಗರಚನೆ; ಪ್ರಕಟಣೆ 1953) ಸ್ಫುಟವಾದ ಉದ್ಗ್ರಂಥ.
—-
ರೇಖಾಚಿತ್ರ: ಮೋಹನ್